ರಾಂಚಿ: ಟೀಂ ಇಂಡಿಯಾ ನಾಯಕತ್ವ ಎನ್ನುವುದು ವ್ಯಾಲಿಡಿಟಿ ಇರುವ ಚೆಕ್ ನಂತೆ ಎಂದು ಮಾಜಿ ನಾಯಕ ರಾಹುಲ್ ದ್ರಾವಿಡ್ ಒಮ್ಮೆ ಹೇಳಿದ್ದರು. ಅವರ ಮಾತು ಅಕ್ಷರಶಃ ಸತ್ಯ. ಯಾಕೆಂದರೆ ಚಾರ್ಮ್ ಕಳೆದುಕೊಂಡ ಮೇಲೆ ಟೀಂ ಇಂಡಿಯಾದ ಯಾವ ಯಶಸ್ವಿ ನಾಯಕನಿಗೂ ಬೆಲೆ ದೊರೆಯಲಿಲ್ಲ.
ಬಹುಶಃ ಅಂತಹದ್ದೊಂದು ಶುಭ ವಿದಾಯ ಸಿಕ್ಕಿದ್ದರೆ ಅದು ಅನಿಲ್ ಕುಂಬ್ಳೆಗೆ ಮಾತ್ರ. ಅವರು ನಾಯಕರಾಗಿಯೇ ಕ್ರಿಕೆಟ್ ನಿಂದ ನಿವೃತ್ತಿ ಪಡೆದಿದ್ದರು. ಅವರು ನಿವೃತ್ತಿಯಾಗುವ ಪಂದ್ಯದ ಕೊನೆಯಲ್ಲಿ ಅವರನ್ನು ಮೈದಾನದಿಂದ ಪೆವಿಲಿಯನ್ ವರೆಗೆ ಕ್ರಿಕೆಟಿಗರು ಹೆಗಲ ಮೇಲೆ ಹೊತ್ತುಕೊಂಡು ತಮ್ಮ ಪ್ರೀತಿ ತೋರಿದ್ದರು.
ಇದು ಬಿಟ್ಟರೆ ನಮ್ಮಲ್ಲಿ ಯಾವ ನಾಯಕನೂ ಶುಭ ವಿದಾಯ ಪಡೆದಿಲ್ಲ. ಬೆಸ್ಟ್ ಉದಾಹರಣೆ ಸೌರವ್ ಗಂಗೂಲಿ. ಅವರು ಒಮ್ಮೆ ತಂಡದಿಂದ ಹೊರ ಹೋದರೆ ಸಾಕು ಎಂದು ಎನ್ನುವಷ್ಟು ಅವರ ಮೇಲೆ ಪ್ರತಿಭಟನೆಗಳೂ ನಡೆದವು. ಮ್ಯಾಚ್ ಫಿಕ್ಸಿಂಗ್ ನಿಂದ ಕೊಳೆತು ನಾರುತ್ತಿದ್ದ ತಂಡಕ್ಕೆ ಹೊಸ ದಾರಿ ತೋರಿದವರೇ ಅವರು. ಟೀಂ ಇಂಡಿಯಾ ಗೆಲುವಿನ ರುಚಿ ಕಂಡಿದ್ದೇ ಅವರ ನಾಯಕತ್ವದಲ್ಲಿ ಆದರೂ ಗಂಗೂಲಿ ಏಕಾಂಗಿಯಂತೆ ನಿವೃತ್ತರಾದರು.
ಇವರಿಗಿಂತ ಮೊದಲು ಸಚಿನ್ ತೆಂಡುಲ್ಕರ್ ಸೋಲಿನಿಂದ ಕಂಗೆಟ್ಟು ತಾವೇ ರಾಜೀನಾಮೆಯಿತ್ತರು. ಮೊಹಮ್ಮದ್ ಅಜರುದ್ದೀನ್ ತಮ್ಮ ಸ್ವಯಂ ಕೃತ ಅಪರಾಧಕ್ಕೆ ಬೆಲೆ ತೆತ್ತರು. ಡೀಸೆಂಟ್ ಕ್ರಿಕೆಟಿಗನೆಂದೇ ಗುರುತಿಸಿಕೊಂಡಿದ್ದ ರಾಹುಲ್ ದ್ರಾವಿಡ್ ಕೂಡಾ ತಂಡದಲ್ಲಿನ ಒಡಕಿಗೆ ಬೇಸತ್ತು ರಾಜೀನಾಮೆಯಿತ್ತರು.
ಆದರೆ ನಂತರ ಬಂದ ಮಹೇಂದ್ರ ಸಿಂಗ್ ಧೋನಿ ಹಲವು ವರ್ಷಗಳ ಕಾಲ ಟೀಂ ಇಂಡಿಯಾ ನಾಯಕರಾದರು. ಅವರ ವೈಭವೋಪೇತ ನಾಯಕತ್ವ ನೋಡಿ ಧೋನಿ ನಾಯಕನಾಗಿ ನಿರ್ಗಮಿಸುವಾಗ ತಂಡ ಒಬ್ಬ ಉತ್ತಮ ನೇತಾರನನ್ನು ಕಳೆದುಕೊಂಡು ಸೂತ್ರವಿಲ್ಲದ ಗಾಳಿಪಟದಂತಾದೀತು ಎಂದೇ ಎಲ್ಲರೂ ಲೆಕ್ಕಾಚಾರ ಹಾಕಿದ್ದರು.
ಆದರೆ ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕರಾಗಿ ಯಶಸ್ವಿಯಾಗುತ್ತಿದ್ದಂತೆ, ಜನ ಧೋನಿಯ ಸೋಲುಗಳನ್ನು ಲೆಕ್ಕಾಚಾರ ಹಾಕಲು ಪ್ರಾರಂಭಿಸಿದರು. ಇತ್ತೀಚೆಗಂತೂ ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಎಲ್ಲಾ ಮಾದರಿಗಳಲ್ಲೂ ಆವರಿಸಿಕೊಂಡ ಪರಿಗೆ ಧೋನಿ ಮಂಕಾದರು. ಐಸಿಸಿ ವರ್ಷದ ತಂಡದಲ್ಲೂ ಏಕದಿನ ತಂಡಕ್ಕೆ ಕೊಹ್ಲಿ ನಾಯಕರಾದರು. ಜಾರ್ಖಂಡ್ ತಂಡವನ್ನು ಮೊದಲ ಬಾರಿಗೆ ರಣಜಿಯಲ್ಲಿ ಗೆಲ್ಲಿಸುವ ಅವರ ಪ್ರಯತ್ನವೂ ಸಫಲವಾಗಲಿಲ್ಲ.
ಹೀಗಾಗಿ ಧೋನಿ ಕೂಡಾ ಯಾವುದೇ ಸೂಚನೆಗಳಿಲ್ಲದೇ, ನಾಯಕನಾಗಿ ವಿದಾಯ ಪಂದ್ಯವಿಲ್ಲದೇ, ಕ್ಯಾಪ್ಟನ್ ಶಿಪ್ ಗೆ ವಿದಾಯ ಹೇಳಿದ್ದಾರೆ. ಆಟಗಾರನಾಗಿಯಾದರೂ, ಅವರಿಗೆ ಉತ್ತಮ ವಿದಾಯ ಸಿಗುವಂತಾಗಲಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ