ಐದನೇ ದಿನದ ಪಿಚ್ ನಲ್ಲಿ ಟೀಂ ಇಂಡಿಯಾ ಸ್ಪಿನ್ ಜೋಡಿಯ ತಡೆಯೋರುಂಟೇ?!

ಸೋಮವಾರ, 13 ಫೆಬ್ರವರಿ 2017 (11:36 IST)
ಹೈದರಾಬಾದ್:  ಮೊದಲೇ ಐದನೇ ದಿನದ ಪಿಚ್. ಅಲ್ಲಲ್ಲಿ ಬಿರುಕು, ಸ್ವಲ್ಪ ತಿರುವು. ಇಷ್ಟೇ ಸಾಕು ಟೀಂ ಇಂಡಿಯಾ ಫೇಮಸ್ ಸ್ಪಿನ್ ಜೋಡಿಯಾದ ಅಶ್ವಿನ್-ಜಡೇಜಾಗೆ. ಭಾರತದ ಗೆಲುವಿಗೆ ಈಗ ಬೇಕಾಗಿರುವುದು ವಿಕೆಟ್.  ಇನ್ನೂ ಅರ್ಧ ದಿನದ ಪಂದ್ಯ ಬಾಕಿ.

 
ಬೆಳಗಿನ ಅವಧಿಯಲ್ಲಿ ಇಂದೂ ಕೂಡಾ ಯಾಕೋ ನಾಯಕ ವಿರಾಟ್ ಕೊಹ್ಲಿ ಅಶ್ವಿನ್ ರನ್ನು ಕರೆತರಲು ಸ್ವಲ್ಪ ನಿಧಾನ ಮಾಡಿದರು. ಜಡೇಜಾ ಮತ್ತು ವೇಗಿಗಳಾದ ಇಶಾಂತ್ ಶರ್ಮಾ ಮತ್ತು ಉಮೇಶ್ ಯಾದವ್ ರನ್ನೇ ಆಡಿಸಿದರು. ಜಡೇಜಾ ಒಂದು ವಿಕೆಟ್ ಕಿತ್ತು ಭಾರತಕ್ಕೆ ಮೇಲುಗೈ ಕೊಡಿಸಿದರೂ, ಮೊದಲ ಇನಿಂಗ್ಸ್ ನ ಹೀರೋ ಮುಷ್ಪಿಕರ್ ರೆಹಮಾನ್ ಕ್ರೀಸ್ ನಲ್ಲಿದ್ದು ಮತ್ತೊಂದು ಜಿಗುಟು ಆಡುವ ಸೂಚನೆ ನೀಡಿದ್ದರು.

ಕೊನೆಗೂ ರೆಹಮಾನ್ ರನ್ನು ಪೆವಿಲಿಯನ್ ಗೆ ಕಳುಹಿಸಲು ಕೊಹ್ಲಿ ಅಶ್ವಿನ್ ರನ್ನು ಕಣಕ್ಕಿಳಿಸಬೇಕಾಯಿತು.  ಮೊದಲ ಓವರ್ ನಲ್ಲೇ ಅಶ್ವಿನ್ ವಿಕೆಟ್ ಕಿತ್ತರು. ನಂತರ ಎರಡೂ ಕಡೆಯಿಂದ ಈ ಸ್ಪಿನ್ ಧ್ವಯರನ್ನೇ ಬೌಲಿಂಗ್ ಗೆ ಇಳಿಸಲಾಯಿತು. ಈ ನಡುವೆ ಬಾಂಗ್ಲಾ ಬ್ಯಾಟ್ಸ್ ಮನ್ ಮೊಹಮ್ಮದುಲ್ಲಾ ಅರ್ಧಶತಕ ಗಳಿಸಿದರು.

ಆದರೂ ಬಾಂಗ್ಲಾದೇಶದ ಬ್ಯಾಟ್ಸ್ ಮನ್ ಗಳನ್ನು ಮೆಚ್ಚಲೇಬೇಕು. ಹೆದರದೇ ಭಾರತದ ಸ್ಪಿನ್ ದಾಳಿಯನ್ನು, ವೇಗಿಗಳನ್ನು ಸಮರ್ಥವಾಗಿ ಎದುರಿಸುತ್ತಾ ಜಿಗುಟಿನ ಆಟವಾಡಿ ಸುಲಭದ ಗೆಲುವು ನಿರಾಕರಿಸುವಲ್ಲಿ ಬಾಂಗ್ಲಾ ಹುಲಿಗಳು ಯಶಸ್ವಿಯಾಗಿದ್ದಾರೆ. ಭೋಜನ ವಿರಾಮದ ವೇಳೆಗೆ ಬಾಂಗ್ಲಾ ಸ್ಕೋರ್ 5 ವಿಕೆಟ್ 202 ನಷ್ಟಕ್ಕೆ ರನ್.  ಭಾರತದ ಗೆಲುವಿಗೆ ಇನ್ನು 5 ವಿಕೆಟ್ ಬೇಕು. ಬಾಂಗ್ಲಾ 257 ರನ್ ಗಳ ಹಿನ್ನಡೆಯಲ್ಲಿದೆ. ಆದರೆ ಪಂದ್ಯ ಉಳಿಸಿಕೊಳ್ಳಲು ಇನ್ನರ್ಧ ನಿಲ್ಲಲೇಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ