ಅಂತರಾಷ್ಟ್ರೀಯ ಆಟಗಾರರ ಸಂಘದ ಮೇಲೆ ಪಾಕ್ ಕ್ರಿಕೆಟ್ ಮಂಡಳಿಗೆ ಯದ್ವಾ ತದ್ವಾ ಸಿಟ್ಟು

ಬುಧವಾರ, 11 ಜನವರಿ 2017 (11:15 IST)
ಕರಾಚಿ: ಪಾಕಿಸ್ತಾನಕ್ಕೆ ಇತ್ತೀಚೆಗೆ ಯಾವ ಅಂತಾರಾಷ್ಟ್ರೀಯ ತಂಡವೂ ಕಾಲಿಡುವ ಧೈರ್ಯ ಮಾಡಿಲ್ಲ. ಇದೊಂದು ಅಸುರಕ್ಷಿತ ಕ್ರಿಕೆಟ್ ತಾಣ ಎಂದಿರುವ ಅಂತಾರಾಷ್ಟ್ರೀಯ ಕ್ರಿಕೆಟಿಗರ ಅಸೋಸಿಯೇಷನ್ (ಎಫ್ಐಸಿಎ) ಮೇಲೆ ಪಾಕ್ ಕ್ರಿಕೆಟ್ ಮಂಡಳಿ ಸಿಕ್ಕಾಪಟ್ಟೆ ಸಿಟ್ಟಾಗಿದೆ.


ಪಾಕ್ ಮಂಡಳಿ ಇದೀಗ ಪಾಕಿಸ್ತಾನ ಕ್ರಿಕೆಟ್ ಲೀಗ್ ಗೆ ಸಿದ್ಧತೆ ನಡೆಸುತ್ತಿದೆ. ಇದರಲ್ಲಿ ಹಲವು ಅಂತಾರಾಷ್ಟ್ರೀಯ ಆಟಗಾರರೂ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಆಟಗಾರರ ಸಂಘ ಹೀಗೊಂದು ಹೇಳಿಕೆ ನೀಡಿರುವುದು ವಿದೇಶಿ ಆಟಗಾರರಲ್ಲಿ ಭಯ ಮೂಡಿಸಿದೆ.

“ಹೀಗೆ ಹೇಳುವ ಮೂಲಕ ಆಟಗಾರರ ಸಂಘ ಪಾಕಿಸ್ತಾನ ಕ್ರಿಕೆಟ್ ಗೆ ಮತ್ತು ಸಾಮಾನ್ಯ ಜನತೆಗೆ ನಷ್ಟ ಮಾಡಿದ್ದಾರೆ. ರಕ್ಷಣೆಯ ಕಾರಣ ನೀಡಿ ನಮಗೆ ತುಂಬಲಾರದ ನಷ್ಟ ಮಾಡಿದ್ದಾರೆ. ಇದು ಇಂತಹ ಪ್ರಾಮುಖ್ಯ ವಿಚಾರಕ್ಕೆ ಆಟಗಾರರ ಮಂಡಳಿಯ ಬೇಜವಾಬ್ದಾರಿಯ ವರ್ತನೆ” ಎಂದು ಪಿಸಿಬಿ ಆಕ್ರೋಶ ವ್ಯಕ್ತಪಡಿಸಿದೆ.

ಎಫ್ಐಸಿಎಯ ಭದ್ರತಾ ಅಧೀಕ್ಷಕರು ಪಾಕಿಸ್ತಾನ ಕ್ರಿಕೆಟ್ ಆಡಲು ಅಸುರಕ್ಷಿತ ತಾಣ ಎಂದಿದ್ದರು. 2009 ರ ಮಾರ್ಚ್ ನಿಂದ ಈ ದೇಶಕ್ಕೆ ಯಾವುದೇ ತಂಡಗಳು ಕ್ರಿಕೆಟ್ ಆಡಲು ಬಂದಿಲ್ಲ. ಈಗ ಎಲ್ಲಾ ಸರಿ ಹೋಗುವ ವೇಳೆಗೆ ಆಟಗಾರರ ಮಂಡಳಿ ಹೀಗೊಂದು ಷರಾ ಬರೆದಿದ್ದು ಪಾಕ್ ಕ್ರಿಕೆಟ್ ಮಂಡಳಿಗೆ ಸಹಿಸಲಾಗುತ್ತಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ