ಲಂಚದ ಆರೋಪ ಎದುರಿಸಿದ ಆಟಗಾರರಿಗೆ ಕ್ಲೀನ್ ಚಿಟ್ : ಅನುರಾಗ್ ಠಾಕೂರ್

ಸೋಮವಾರ, 29 ಜೂನ್ 2015 (14:11 IST)
ಐಸಿಸಿ ತನಿಖೆಯಿಂದ ಯಾವುದೇ ಫಲಿತಾಂಶ ಬರದಿರುವುದರಿಂದ ಲಂಚದ ಆರೋಪ ಎದುರಿಸುತ್ತಿರುವ ಮೂವರು ಆಟಗಾರರಿಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ತಿಳಿಸಿದ್ದಾರೆ.  ಮಾಜಿ ಐಪಿಎಲ್ ಮುಖ್ಯಸ್ಥ ಲಲಿತ್ ಮೋದಿ 2013ರಲ್ಲಿ ಐಸಿಸಿಗೆ ಪತ್ರವೊಂದನ್ನು ಬರೆದು, ಚೆನ್ನೈ ಸೂಪರ್ ಕಿಂಗ್ಸ್‌ಗೆ ಸೇರಿದ ಮೂವರು ಆಟಗಾರರಿಗೆ ಮುಂಬೈನ ಬಿಲ್ಡರ್ ಲಂಚ ನೀಡಿದ್ದಾರೆಂದು ಆರೋಪಿಸಿದ್ದರು.
 
ರವೀಂದ್ರ ಜಡೈಜಾ, ಡ್ವೇನ್ ಬ್ರೇವೊ ಮತ್ತು ಸುರೇಶ್ ರೈನಾ ಸ್ಥಿರಾಸ್ತಿ ದೊರೆ ಬಾಬಾ ದಿವಾನ್ ಜೊತೆ ನಿಕಟ ಸಂಪರ್ಕದಲ್ಲಿದ್ದು, ದಿವಾನ್ ಈ ಮೂವರಿಗೆ ತಲಾ 20 ಕೋಟಿ ರೂ. ಮೊತ್ತದ ನಗದು ಮತ್ತು ಫ್ಲಾಟ್‌ಗಳನ್ನು ಪಾವತಿ ಮಾಡಿದ್ದಾರೆ ಎಂದು ಮೋದಿ ಪತ್ರದಲ್ಲಿ ತಿಳಿಸಿದ್ದರು. ಮೋದಿ ಪತ್ರ ತಲುಪಿದ್ದಾಗಿ ಹಾಗೂ  ಸೂಕ್ತ ಕ್ರಮ ಕೈಗೊಂಡಿದ್ದಾಗಿ ಮತ್ತು ಬಿಸಿಸಿಐ ಭಯೋತ್ಪಾದನೆ ವಿರೋಧಿ ಘಟಕದ ಜೊತೆ ಹಂಚಿಕೊಂಡಿದ್ದಾಗಿ ಐಸಿಸಿ ತಿಳಿಸಿತ್ತು.
 
ತನಿಖೆ ನಡೆಸುವುದು ಐಸಿಸಿ ವ್ಯಾಪ್ತಿಗೆ ಬರುವುದರಿಂದ, ಐಸಿಸಿ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅದರ ಅರ್ಥವೇನೆಂದರೆ, ಆಟಗಾರರಿಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂದು ಠಾಕೂರ್ ಹೇಳಿದರು. 
 
 ಇಬ್ಬರು ಆಟಗಾರರ ವಿರುದ್ಧ ಬಿಸಿಸಿಐ ಯಾವುದೇ ಕ್ರಮ ಕೈಗೊಂಡಿದೆಯೇ ಎಂಬ ಪ್ರಶ್ನೆಗೆ ಈ ವಿಷಯದ ಪರಿಶೀಲನೆ ಐಸಿಸಿ ವ್ಯಾಪ್ತಿಗೆ ಬರುತ್ತದೆ ಎಂದು ಠಾಕೂರ್ ಖಚಿತಪಡಿಸಿದರು. 

ವೆಬ್ದುನಿಯಾವನ್ನು ಓದಿ