ಪ್ರೇಕ್ಷಕರಿಲ್ಲದೇ ಬಣಗುಡುತ್ತಿರುವ ಟೆಸ್ಟ್ ಪಂದ್ಯಗಳು, ವಿಂಡೀಸ್ ಕ್ರಿಕೆಟ್ ಮಂಡಳಿಗೆ ಚಿಂತೆ

ಬುಧವಾರ, 3 ಆಗಸ್ಟ್ 2016 (19:01 IST)
ಮೈದಾನದಲ್ಲಿ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ತಿಣುಕಾಡುತ್ತಿರುವ ಜತೆಗೆ ಪ್ರಸಕ್ತ ಭಾರತದ ವಿರುದ್ಧ ಟೆಸ್ಟ್ ಸರಣಿಯಲ್ಲಿ ಸ್ಟೇಡಿಯಂನಲ್ಲಿ ಪ್ರೇಕ್ಷಕರು ಹೆಚ್ಚು ಸಂಖ್ಯೆಯಲ್ಲಿರದೇ ಬಣಗುಡುತ್ತಿದ್ದು, ಕುರ್ಚಿಗಳು ಖಾಲಿ, ಖಾಲಿಯಾಗಿರುವುದು ಸಾಮಾನ್ಯ ದೃಶ್ಯವಾಗಿವೆ. ತಂಡದ ಸಾಧನೆ ಬಗ್ಗೆ ಅಭಿಮಾನಿಗಳು ಬೇಸರಗೊಂಡಿದ್ದು, ಕ್ರೀಡಾಂಗಣಕ್ಕೆ ಬರುವುದನ್ನೇ ನಿಲ್ಲಿಸುವ ಮೂಲಕ ವೆಸ್ಟ್ ಇಂಡೀಸ್ ಮಂಡಳಿಯನ್ನು ಇಕ್ಕಟ್ಟಿಗೆ ಸಿಕ್ಕಿಸಿದೆ.
 
ಪ್ರೇಕ್ಷಕರನ್ನು ಮೈದಾನಕ್ಕೆ ಸೆಳೆಯುವ ತಮ್ಮ ಪ್ರಯತ್ನವನ್ನು ಹೆಚ್ಚಿಸಬೇಕು ಎಂದು ಡಬ್ಲ್ಯುಐಸಿಬಿ ಅಧ್ಯಕ್ಷ ಡೇವ್ ಕ್ಯಾಮರಾನ್ ತಿಳಿಸಿದರು. ಮೈದಾನದಲ್ಲಿ ವೈಫೈ ಸೌಲಭ್ಯ ಕಲ್ಪಿಸಬೇಕು. ಮಕ್ಕಳ ಅವಶ್ಯಕತೆಗಳನ್ನು ಉತ್ತಮ ರೀತಿಯಲ್ಲಿ ಪೂರೈಸಬೇಕು ಎಂದು ಪ್ರೇಕ್ಷಕರನ್ನು ಸೆಳೆಯುವ ತಂತ್ರದ ಬಗ್ಗೆ ಅವರು ಹೇಳಿದರು. 
 
ಟೆಸ್ಟ್ ಪಂದ್ಯಗಳು ಇಡೀ ದಿನದ ಅನುಭವ. ಕ್ರಿಕೆಟ್ ನೋಡಿ ಆನಂದಿಸಬೇಕೆಂಬ ಉದ್ದೇಶದಿಂದ ಪೋಷಕರು ತಮ್ಮ ಮಕ್ಕಳನ್ನು ಕ್ರಿಕೆಟ್ ವೀಕ್ಷಣೆಗೆ ಕರೆದುಕೊಂಡು ಹೋಗುತ್ತಾರೆ. ಆದ್ದರಿಂದ ನಾವು ಮನರಂಜನೆಗೆ ಸಂಬಂಧಿಸಿದಂತೆ ನಾವು ಇನ್ನಷ್ಟು ಸಾಧಿಸಬೇಕಿದೆ. ಅಭಿಮಾನಿಗಳು ಮನೆಯಲ್ಲಿ ಕುಳಿತು ಪಂದ್ಯವನ್ನು ವೀಕ್ಷಿಸದೇ ಮೈದಾನಕ್ಕೆ ಬರುವಂತೆ ಖಾತರಿಪಡಿಸಿಕೊಳ್ಳಬೇಕು ಎಂದು ಕ್ಯಾಮರಾನ್ ಹೇಳಿದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ