ಟೀಂ ಇಂಡಿಯಾ ಕೋಚ್ ಆಗಲು ರಾಹುಲ್ ದ್ರಾವಿಡ್ ಒಪ್ಪಿಗೆ?!

ಶನಿವಾರ, 16 ಅಕ್ಟೋಬರ್ 2021 (10:00 IST)
ಮುಂಬೈ: ಮುಂಬರುವ ಟಿ20 ವಿಶ್ವಕಪ್ ಬಳಿಕ ಕೋಚ್ ಸ್ಥಾನದಿಂದ ರವಿಶಾಸ್ತ್ರಿ ಕೆಳಗಿಳಿಯಲಿದ್ದು, ಅವರ ಸ್ಥಾನಕ್ಕೆ ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಯಾರು ಆಯ್ಕೆಯಾಗುತ್ತಾರೆ ಎಂಬ ಬಗ್ಗೆ ಚರ್ಚೆ ನಡೆದಿದೆ.


ಈ ನಡುವೆ ‘ವಾಲ್’ ರಾಹುಲ್ ದ್ರಾವಿಡ್ ಮುಂದಿನ ಕೋಚ್ ಆಗಲಿದ್ದಾರೆ ಎಂಬ ಸುದ್ದಿ ಬಲವಾಗಿ ಕೇಳಿಬಂದಿದೆ. ಮೊದಲು ಕೋಚ್ ಹುದ್ದೆ ನಿರಾಕರಿಸಿದ್ದ ದ್ರಾವಿಡ್ ಈಗ ಒಪ್ಪಿಗೆ ನೀಡಿದ್ದಾರೆ. ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದು ಮಾಧ್ಯಮವೊಂದು ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

ಇನ್ನು, ದ್ರಾವಿಡ್ ಕೋಚ್ ಆಗಲು ಒಪ್ಪಿದ್ದಾರೆಂಬ ಸುದ್ದಿ ಪ್ರಕಟವಾಗುತ್ತಿದ್ದಂತೇ ನೆಟ್ಟಿಗರು ಭಾರೀ ಸಂಖ್ಯೆಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯಕ್ಕೆ ಎನ್ ಸಿಎ ಮುಖ್ಯ ಕೋಚ್ ಆಗಿರುವ ದ್ರಾವಿಡ್ ಇಂದು ಟೀಂ ಇಂಡಿಯಾದಲ್ಲಿರುವ ಬಹುತೇಕ ಯುವ ಆಟಗಾರರ ಪಾಲಿಗೆ ಗುರು. ಹೀಗಾಗಿ ಅವರೇ ಮುಂದಿನ ಕೋಚ್ ಆಗಲಿ ಎನ್ನುವುದು ಅನೇಕರ ಆಶಯ.

ಎರಡು ವರ್ಷಗಳ ಕಾಲ ಕೋಚ್ ಆಗಿ ಮುಂದುವರಿಯಲು ಸದ್ಯಕ್ಕೆ ದ್ರಾವಿಡ್ ಒಪ್ಪಿಗೆ ನೀಡಿದ್ದಾರೆ ಎಂದು ಮಾಧ‍್ಯಮ ವರದಿ ಹೇಳಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆ ಹೊರಬಂದಿಲ್ಲ. ಈ ಮೊದಲು ಅನಿಲ್ ಕುಂಬ್ಳೆ ಹೆಸರು ಬಲವಾಗಿ ಕೇಳಿಬಂದಿತ್ತು. ಆದರೆ ಐಪಿಎಲ್ ನಲ್ಲಿ ಅವರ ಕೋಚಿಂಗ್ ನಲ್ಲಿ ಪಂಜಾಬ್ ಪ್ರದರ್ಶನ ಹೀನಾಯವಾಗಿತ್ತು. ಅಲ್ಲದೆ, ಕೊಹ್ಲಿ ಜೊತೆಗೆ ಹಿಂದಿನ ವೈಮನಸ್ಯ ಕಾರಣದಿಂದ ಬಿಸಿಸಿಐ ಒಳಗೇ ಅವರ ಆಯ್ಕೆಗೆ ಪ್ರತಿರೋಧವಿತ್ತು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ