ರಾಹುಲ್ ದ್ರಾವಿಡ್ ನೀತಿಯಿಂದಾಗಿ ಕರ್ನಾಟಕದ ಒಬ್ಬ ಆಟಗಾರನಿಗೆ ಸನ್ಮಾನ, ಇನ್ನೊಬ್ಬರಿಗೆ ಬರೆ!
ಶುಕ್ರವಾರ, 11 ಮೇ 2018 (08:58 IST)
ಮುಂಬೈ: ಆಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ವಿರಾಟ್ ಕೊಹ್ಲಿ ಸ್ಥಾನಕ್ಕೆ ಕರುಣ್ ನಾಯರ್ ಆಯ್ಕೆ ಮಾಡಿರುವುದರ ಬಗ್ಗೆ ಬಿಸಿಸಿಐ ವಲಯದಲ್ಲಿ ಅಸಮಾಧಾನದ ಅಲೆ ಎದ್ದಿದೆ ಎನ್ನಲಾಗಿದೆ.
ರಣಜಿ ಮತ್ತು ದೇಶೀಯ ಪಂದ್ಯಗಳಲ್ಲಿ ಇನ್ನೊಬ್ಬ ಕರ್ನಾಟಕದ ಆಟಗಾರ ಮಯಾಂಕ್ ಅಗರ್ವಾಲ್ ಭರ್ಜರಿ ಪ್ರದರ್ಶನ ತೋರಿದ್ದರು. ಹಾಗಿದ್ದರೂ ಅವರಿಗೆ ಸ್ಥಾನ ನೀಡದೇ ಕರುಣ್ ನಾಯರ್ ಗೆ ಸ್ಥಾನ ನೀಡಿದ್ದಕ್ಕೆ ಅಸಮಾಧಾನ ಮೂಡಿದೆ ಎನ್ನಲಾಗಿದೆ. ಆದರೆ ಇದಕ್ಕೆ ಕಾರಣವಾಗಿರುವುದು ಭಾರತ ಎ ತಂಡದ ಕೋಚ್ ರಾಹುಲ್ ದ್ರಾವಿಡ್ ರ ನಿಯಮ.
ಟೀಂ ಇಂಡಿಯಾದಲ್ಲಿ ಸ್ಥಾನ ಸಿಗಬೇಕೆಂದರೆ ಭಾರತ ಎ ತಂಡದಲ್ಲಿ ಆಡಲೇಬೇಕೆಂಬ ನಿಯಮವಿದೆ. ಈ ನಿಯಮ ಸ್ಥಾಪನೆಯಾಗಲು ಕಾರಣ ರಾಹುಲ್ ದ್ರಾವಿಡ್. ಯುವ ಆಟಗಾರರು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಮೊದಲು ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಗೆ ಸಿದ್ಧತೆ ನಡೆಸಬೇಕೆಂಬ ಉದ್ದೇಶದಿಂದ ದ್ರಾವಿಡ್ ಇಂತಹದ್ದೊಂದು ನಿಯಮ ತರಬೇಕೆಂದು ಆಗ್ರಹಿಸಿದ್ದರು.
ಆದರೆ ಆ ನಿಯಮದಿಂದ ನಷ್ಟವಾಗಿರುವುದು ಮಯಾಂಕ್ ಅಗರ್ವಾಲ್ ಗೆ. ಮಯಾಂಕ್ ಇನ್ನೂ ಎ ತಂಡದಲ್ಲಿ ಆಡಿಲ್ಲ. ಇದೇ ಕಾರಣಕ್ಕೆ ಅವರನ್ನು ಉತ್ತಮ ಫಾರ್ಮ್ ನ ಹೊರತಾಗಿಯೂ ರಾಷ್ಟ್ರೀಯ ತಂಡಕ್ಕೆ ಪರಿಗಣಿಸಲಾಗುತ್ತಿಲ್ಲ. ಇದು ಕೆಲವರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.