ಮುಂಬೈ: ಯುಎಇನಲ್ಲಿ ನಡೆಯಲಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಆಡಲು ಭಾರತ ಸರ್ಕಾರ ಟೀಂ ಇಂಡಿಯಾಗೆ ಒಪ್ಪಿಗೆ ನೀಡುತ್ತಿದ್ದಂತೇ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಹಲ್ಗಾಮ್ ನಲ್ಲಿ ಪತಿಯ ಮೃತದೇಹದ ಮುಂದೆ ಕೂತವರ ಸ್ಥಿತಿ ಮರೆತು ಹೋಯ್ತಾ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.
ಸೆಪ್ಟೆಂಬರ್ 9 ರಿಂದ ಏಷ್ಯಾ ಕಪ್ ಕ್ರಿಕೆಟ್ ಆರಂಭವಾಗಲಿದ್ದು, ಟೀಂ ಇಂಡಿಯಾ ಸೆ. 14 ರಂದು ಪಾಕಿಸ್ತಾನದ ವಿರುದ್ಧ ಪಂದ್ಯವಾಡಬೇಕಿದೆ. ಈ ಪಂದ್ಯದಲ್ಲಿ ಆಡಲು ಈಗ ಕೇಂದ್ರ ಕ್ರೀಡಾ ಸಚಿವಾಲಯ ಟೀಂ ಇಂಡಿಯಾಗೆ ಅನುಮತಿ ನೀಡಿದೆ. ಇಂತಹ ಹಲವು ತಂಡಗಳು ಭಾಗಿಯಾಗುವ ಟೂರ್ನಮೆಂಟ್ ಗಳಲ್ಲಿ ಮಾತ್ರ ಪಾಕಿಸ್ತಾನದ ವಿರುದ್ಧ ಆಡಬಹುದು ಎಂದು ಕ್ರಿಕೆಟ್ ಮಾತ್ರವಲ್ಲದೆ ಬೇರೆ ಎಲ್ಲಾ ಕ್ರೀಡೆಗಳಿಗೂ ಅನುಮತಿ ನೀಡಲಾಗಿದೆ. ಆದರೆ ಉಭಯ ದೇಶಗಳ ಸರಣಿಗೆ ಒಪ್ಪಿಗೆ ನೀಡಿಲ್ಲ.
ಏಷ್ಯಾ ಕಪ್ ನಲ್ಲಿ ಟೀಂ ಇಂಡಿಯಾಗೆ ಪಾಕಿಸ್ತಾನ ವಿರುದ್ಧ ಆಡಲು ಅನುಮತಿ ನೀಡುತ್ತಿದ್ದಂತೇ ಇತ್ತ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟು ಬೇಗ ಪಹಲ್ಗಾಮ್ ದಾಳಿ ಮರೆತು ಹೋಯ್ತಾ? ಇಷ್ಟೇನಾ ನಮ್ಮ ದೇಶ ಭಕ್ತಿ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ನಾವೆಂದಿಗೂ ಪಹಲ್ಗಾಮ್ ದಾಳಿ ಮರೆಯಲು ಸಾಧ್ಯವಿಲ್ಲ. ಈ ಪಂದ್ಯವನ್ನು ನೋಡಲ್ಲ ಎಂದು ಕೆಲವರು ಕೇಂದ್ರದ ವಿರುದ್ಧ ಕಿಡಿ ಕಾರಿದ್ದಾರೆ.