ಅಭ್ಯಾಸದ ವೇಳೆ ಬಿಂದಾಸ್ ಕೋಚ್ ದ್ರಾವಿಡ್: ನೆಟ್ಟಿಗರ ಪ್ರತಿಕ್ರಿಯೆ ನೋಡಿ!
ಶನಿವಾರ, 18 ಡಿಸೆಂಬರ್ 2021 (16:55 IST)
ಜೊಹಾನ್ಸ್ ಬರ್ಗ್: ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಆಡಲು ಕಾಮನಬಿಲ್ಲಿನ ನಾಡಿಗೆ ಬಂದಿಳಿದಿರುವ ಟೀಂ ಇಂಡಿಯಾ ಕ್ರಿಕೆಟಿಗರು ಇಂದು ಮೆಂಟಲ್ ಕಂಡೀಷನರ್ ಕೋಚ್ ಮಾರ್ಗದರ್ಶನದಲ್ಲಿ ಲಘು ಅಭ್ಯಾಸ ನಡೆಸಿದರು.
ಈ ವೇಳೆ ಮಾನಸಿಕ ಒತ್ತಡ ಕಡಿಮೆಯಾಗಲು ಕ್ರಿಕೆಟಿಗರಿಗೆ ಫುಟ್ಬಾಲ್ ಆಡಿಸಲಾಯಿತು. ಈ ವೇಳೆ ಕೋಚ್ ರಾಹುಲ್ ದ್ರಾವಿಡ್ ಕೂಡಾ ಆಟಗಾರರೊಂದಿಗೆ ಬಿಂದಾಸ್ ಆಗಿ ಫುಟ್ಬಾಲ್ ಆಡಿ ಗಮನ ಸೆಳೆದರು. ಚುರುಕಾಗಿ ಓಡಾಡಿ ಕಿಕ್ ಮಾಡುತ್ತಾ, ಸಹ ಆಟಗಾರರೊಂದಿಗೆ ಜೋಕ್ ಮಾಡುತ್ತಾ ದ್ರಾವಿಡ್ ಆಡುತ್ತಿರುವ ವಿಡಿಯೋಗಳನ್ನು ಬಿಸಿಸಿಐ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಈ ವಿಡಿಯೋಗೆ ನೆಟ್ಟಿಗರು ಭಾರೀ ಸಂಖ್ಯೆಯಲ್ಲಿ ಪ್ರತಿಕ್ರಿಯಿಸಿದ್ದು, ಆಟಗಾರರಿಂದ ಕೋಚ್ ಹೆಚ್ಚು ಚುರುಕು ಮತ್ತು ಫಿಟ್ ಆಗಿದ್ದಾರೆ ಎಂದು ತಮಾಷೆ ಮಾಡಿದ್ದಾರೆ. ಇನ್ನು, ಕೆಲವರು ದ್ರಾವಿಡ್ ಕೂಡಾ ಆಟಗಾರರಂತೇ ತೋರುತ್ತಾರೆ. ಬಹುಶಃ ಹಿಂದಿನ ಕೋಚ್ ಈ ರೀತಿ ಸಕ್ರಿಯವಾಗಿ ಆಟಗಾರರ ಜೊತೆ ತಾವೂ ಒಬ್ಬರಾಗಿ ಬೆರೆತಿರಲಿರಲ್ಲ ಎಂದಿದ್ದಾರೆ.