ಮುಂಬೈ: ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ಸತತ ಎರಡು ಸೋಲುಗಳ ಬಳಿಕ ತೀವ್ರ ಟೀಕೆಗೆ ಗುರಿಯಾಗಿರುವ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಪರ ರವಿಚಂದ್ರನ್ ಅಶ್ವಿನ್ ಮಾತನಾಡಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡ ಈ ಆವೃತ್ತಿಗೆ ಯಶಸ್ವೀ ನಾಯಕ ರೋಹಿತ್ ಶರ್ಮಾರನ್ನು ಕಿತ್ತು ಹಾಕಿ ಆ ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯರನ್ನು ನೇಮಿಸಿತ್ತು. ಇದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಅದಾದ ಬಳಿಕ ಹಾರ್ದಿಕ್ ಆನ್ ಲೈನ್ ನಲ್ಲಿ ಟ್ರೋಲ್ ಆಗುತ್ತಲೇ ಇದ್ದರು.
ಇದೀಗ ಮೈದಾನದಲ್ಲೂ ಅವರನ್ನು ಮೂದಲಿಸಲಾಗುತ್ತಿದೆ. ಅಷ್ಟೇ ಅಲ್ಲದೆ ಸತತ ಎರಡು ಸೋಲುಗಳ ಬಳಿಕವಂತೂ ಅಭಿಮಾನಿಗಳ ಟೀಕೆಗೆ ಇನ್ನಷ್ಟು ಹೆಚ್ಚಾಗಿದೆ. ಹಾರ್ದಿಕ್ ಗೆ ಅವಹೇಳನ ಮಾಡಲಾಗುತ್ತಿದೆ. ಇದರ ಬಗ್ಗೆ ಈಗ ಟೀಂ ಇಂಡಿಯಾ ಸಹ ಆಟಗಾರ ರವಿಚಂದ್ರನ್ ಅಶ್ವಿನ್ ಪ್ರತಿಕ್ರಿಯಿಸಿದ್ದಾರೆ.
ತಮ್ಮ ಯೂ ಟ್ಯೂಬ್ ನಲ್ಲಿ ಮಾತನಾಡಿರುವ ಅಶ್ವಿನ್ ಅಭಿಮಾನಿಗಳ ಕಲಹಕ್ಕೆ ಆಟಗಾರರು ಅಥವಾ ಫ್ರಾಂಚೈಸಿ ಜವಾಬ್ಧಾರಿಯಲ್ಲ. ಹಾರ್ದಿಕ್ ಧೋನಿಯಂತೆ ಎಲ್ಲಾ ಟೀಕೆಗಳಿಗೂ ಕಿವಿ ಬಂದ್ ಮಾಡಿ ತಮ್ಮ ಕೆಲಸದಲ್ಲಿ ಗಮನ ಹರಿಸಲು ಕಲಿಯಬೇಕು. ಇದು ಕ್ರಿಕೆಟ್, ಸಿನಿಮಾವಲ್ಲ. ಇಲ್ಲಿಯೂ ಮಾರ್ಕೆಟಿಂಗ್, ಬ್ರ್ಯಾಂಡ್ ಎಲ್ಲಾ ಇರಬಹುದು. ಆದರೆ ಸಿನಿಮಾಗಿಂತ ಇದು ಭಿನ್ನ. ಅಭಿಮಾನಿಗಳು ಯಾವತ್ತೂ ಇಷ್ಟು ಕೀಳುಮಟ್ಟಕ್ಕಿಳಿದು ಟೀಕೆ ಮಾಡಬಾರದು ಎಂದು ಅಶ್ವಿನ್ ಹೇಳಿದ್ದಾರೆ.