ರಿಯಾಜ್ ಆಲ್ರೌಂಡ್ ಆಟ: ಜಿಂಬಾಬ್ವೆ ವಿರುದ್ಧ ಪಾಕ್ 20 ರನ್ ಗೆಲುವು

ಸೋಮವಾರ, 2 ಮಾರ್ಚ್ 2015 (11:20 IST)
ಪಾಕಿಸ್ತಾನ ಮತ್ತು ಜಿಂಬಾಬ್ವೆ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ 20 ರನ್‌ಗಳಿಂದ ಜಯಗಳಿಸುವ ಮೂಲಕ ಮೊದಲ ಗೆಲುವು ದಾಖಲಿಸಿದೆ. ಮೊದಲಿಗೆ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 7 ವಿಕೆಟ್‌ಗೆ ಸಾಧಾರಣ 235 ರನ್ ಗಳಿಸಿದರು.ವಹಾಬ್ ರಿಯಾಜ್ ಅವರ ಆಲ್‌ರೌಂಡ್ ಆಟ ಮತ್ತು ಮಹಮ್ಮದ್ ಇರ್ಫಾನ್ ಅವರ ಅತ್ಯುತ್ತಮ 30ರನ್‌ಗೆ 4 ವಿಕೆಟ್ ನೆರವಿನಿಂದ ಪಾಕಿಸ್ತಾನ ಜಿಂಬಾಬ್ವೆ ವಿರುದ್ಧ ಪೂಲ್ ಬಿ ಪಂದ್ಯದಲ್ಲಿ 20 ರನ್‌ಗಳಿಂದ ಜಯಗಳಿಸಿದೆ. 

ಬ್ರಿಸ್ಬೇನ್‌ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಇರ್ಫಾನ್ ಗಾಬಾದಲ್ಲಿ ಹೆಚ್ಚುವರಿ ಬೌನ್ಸ್ ಬಳಸಿಕೊಂಡು ಚಾಮ್ಮು ಚಿಬಾ(9) ಮತ್ತು ಸಿಕಂದರ್ ರಾಜಾ(8)ಅವರನ್ನು ಔಟ್ ಮಾಡಿದರು. ಹ್ಯಾಮಿಲ್ಟನ್ ಮಸ್ಕಾಡ್ಜ ಮತ್ತು ಬ್ರೆಂಡನ್ ಟೇಲರ್ ಉತ್ತಮ ಜೊತೆಯಾಟವಾಡಿದರು.

ಆದಾಗ್ಯೂ ಇರ್ಫಾನ್ ಅವರಿಬ್ಬರ ನಡುವೆ 52 ರನ್ ಜೊತೆಯಾಟ ಮುರಿದು ಮಸಕಾಡ್ಜಾ ಅವರನ್ನು ಔಟ್ ಮಾಡಿದರು. ಮಸಕಾಜ್ಡಾ ಮಿಡ್ ಆಫ್‌ಗೆ ಹೊಡೆದ ಶಾಟನ್ನು ಮಿಸಬ್ ಉಲ್ ಹಕ್ ಕ್ಯಾಚ್ ಹಿಡಿದಿದ್ದರಿಂದ ಮಸಕಾಡ್ಜಾ ಔಟಾದರು. ನಂತರ ಆಡಲಿಳಿದ ವಿಲಿಯಮ್ಸ್ ರನ್ ರೇಟ್‌ಗೆ ಚೇತರಿಕೆ ನೀಡಿದರು. ಬ್ರೆಂಡನ್ ಟೇಲರ್ 72 ಎಸೆತಗಳಲ್ಲಿ 50 ರನ್ ಗಳಿಸಿದರು.

ಇವರಿಬ್ಬರ ನಡುವೆ 54 ರನ್ ಜೊತೆಯಾಟದಿಂದ ಜಿಂಬಾಬ್ವೆಗೆ ಗೆಲ್ಲುವ ಭರವಸೆ ಮೂಡಿಸಿತ್ತು.ಆದರೆ ರಿಯಾಜ್ ಈ ಜೊತೆಯಾಟವನ್ನು ಮುರಿದು ಟೇಲರ್ ಅವರನ್ನು ಔಟ್ ಮಾಡಿದರು. 9ನೇ ವಿಕೆಟ್‌ಗೆ ತಿನಾಶೆ ಪನ್ಯಾಂಗರ ಮತ್ತು ಚಿಗುಂಬುರ 47 ರನ್ ಜೊತೆಯಾಟದಿಂದ ಪಾಕಿಸ್ತಾನ ಪಾಳೆಯದಲ್ಲಿ ಒಂದು ಹಂತದಲ್ಲಿ ಆತಂಕ ಮೂಡಿಸಿತ್ತು. ಚಿಗುಂಬುರಾ ಕೆಲವು ಅಬ್ಬರದ ಹೊಡೆತಗಳನ್ನು ಆಡಿದರು. ಶಾಹಿದ್ ಅಫ್ರಿದಿ 57ನೇ ಓವರಿನಲ್ಲಿ ಒಂದು ರನ್ ನೀಡದೇ ಮೇಡಿನ್ ಓವರ್ ಮಾಡಿದರು. ಆಗ  ಜಿಂಬಾಬ್ವೆಗೆ 18 ಎಸೆತಗಳಿಗೆ 34 ರನ್ ಅಗತ್ಯವಿತ್ತು. ರಿಯಾಜ್ 48ನೇ ಓವರಿನಲ್ಲಿ ಕೇವಲ 6 ರನ್ ನೀಡಿದರು.

ಕೊನೆಯ ಓವರಿನಲ್ಲಿ ಇರ್ಫಾನ್ ಕೇವಲ 4 ರನ್ ನೀಡಿದರು.ಜಿಂಬಾಬ್ವೆ 49.4 ಓವರುಗಳಲ್ಲಿ 215 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಸೋಲಪ್ಪಿದೆ.ಇದಕ್ಕೆ ಮುಂಚೆ ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ತಂಡದ ಪರ ಮಿಶಬ್ ಉಲ್ ಹಕ್ ಅವರ 40ನೇ ಅರ್ಧಶತಕ ಮತ್ತು ರಿಯಾಜ್ ಅವರ 45 ಎಸೆತಗಳಲ್ಲಿ 50 ರನ್ ನೆರವಿನಿಂದ ಪಾಕಿಸ್ತಾನ 7 ವಿಕೆಟ್ ಕಳೆದುಕೊಂಡು 235 ರನ್ ಗಳಿಸಿತ್ತು. ಪಾಕಿಸ್ತಾನದ ಪರ ಆರಂಭಿಕ ಆಟಗಾರರಾದ ನಾಸಿರ್ ಜಮ್ಶೇದ್ ಕೇವಲ 1 ರನ್‌ಗೆ ಔಟಾದರು.

ತೆಂಡೈ ಚಟಾರಾ ತಮ್ಮ ಮೊದಲ ಓವರಿನಲ್ಲೇ ನಾಸಿರ್ ಅವರನ್ನು ಔಟ್ ಮಾಡಿದರು.ಚಟಾರಾ ಮರುಓವರಿನಲ್ಲಿ ಅಹ್ಮದ್ ಶೆಹಜಾದ್ ಅವರು ವಿಕೆಟ್ ಕೀಪರ್‌ಗೆ ಕ್ಯಾಚಿತ್ತು ಔಟಾದರು. ಚಟಾರಾ ಮತ್ತು ಪನ್ಯಾನ್‌ಗರಾ ಅವರ ಶಿಸ್ತಿನ ಬೌಲಿಂಗ್‌ನಿಂದ ಪಾಕ್ ಆಟಗಾರರು ರನ್ ಗಳಿಸಲು ತಿಣುಕಾಡಿದರು. ಮಿಶಬ್ ಉಲ್ ಹಕ್ 121 ಎಸೆತಗಳಲ್ಲಿ 73 ಮತ್ತು ಉಮರ್ ಅಕ್ಮಲ್ 42ಎಸೆತಗಳಲ್ಲಿ 33 ರನ್ ಹೊಡೆದರು. ಮಿಶಬ್ ಉಲ್ ಹಕ್ ಚಟಾರಾ ಬೌಲಿಂಗ್‌ನಲ್ಲಿ ಸೀನ್‌ಗೆ ಕ್ಯಾಚಿತ್ತು ಔಟಾದರು. ಅಕ್ಮಲ್ ಸೀನ್ ವಿಲಿಯಮ್ಸ್‌ಗೆ ಬೌಲ್ಡ್ ಆದರು. ಕೊನೆಯಲ್ಲಿ ವಹಾಬಾ ರಿಯಾಜ್ ಬಿರುಸಿನ 54 ರನ್ ಹೊಡೆದಿದ್ದರಿಂದ ಪಾಕಿಸ್ತಾನ ಸಾಧಾರಣ ಮೊತ್ತ 235 ರನ್ ಗಳಿಸಿತು.

ವೆಬ್ದುನಿಯಾವನ್ನು ಓದಿ