Rishabh Pant: ಅನಿಲ್ ಕುಂಬ್ಳೆಯನ್ನು ನೆನಪಿಸಿದ ರಿಷಭ್ ಪಂತ್

Krishnaveni K

ಶುಕ್ರವಾರ, 25 ಜುಲೈ 2025 (08:46 IST)
Photo Credit: X
ಓಲ್ಡ್ ಟ್ರಾಫರ್ಡ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಕಾಲು ಬೆರಳಿನ ಮುರಿತಕ್ಕೊಳಗಾಗಿದ್ದರೂ ಮೈದಾನಕ್ಕಿಳಿದು ಅರ್ಧಶತಕ ಭಾರಿಸಿದ ರಿಷಭ್ ಪಂತ್ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆಯನ್ನು ನೆನಪಿಸಿದ್ದಾರೆ.

ರಿಷಭ್ ಪಂತ್ ಮೊನ್ನೆ ಗಾಯಗೊಂಡು ನೋವಿನಿಂದ ನರಳಾಡಿದ್ದು ನೋಡಿದರೆ ಅವರು ವಾಪಸ್ ಮೈದಾನಕ್ಕಿಳಿಯುವುದೇ ಅನುಮಾನವಿತ್ತು. ಆದರೆ ನಿನ್ನೆ ಶ್ರಾದ್ಧೂಲ್ ಠಾಕೂರ್ ವಿಕೆಟ್ ಬಿದ್ದೊಡನೆ ಕುಂಟುತ್ತಲೇ ರಿಷಭ್ ಮೈದಾನಕ್ಕಿಳಿದಿದ್ದು ನೋಡಿ ಪ್ರೇಕ್ಷಕರು ಅಚ್ಚರಿಗೊಂಡರು. ಅಲ್ಲದೆ ಅವರ ಸಾಹಸದ ಮನೋಭಾವಕ್ಕೆ ಮೈದಾನದಲ್ಲಿದ್ದವರೆಲ್ಲರೂ ಎದ್ದು ನಿಂತು ಗೌರವ ಸಲ್ಲಿಸಿದರು.

ಸರಿಯಾಗಿ ನಿಲ್ಲಲೂ ಆಗದ ಸ್ಥಿತಿಯಲ್ಲಿದ್ದರೂ ರಿಷಭ್ ಬ್ಯಾಟಿಂಗ್ ಮಾಡಿ ಅರ್ಧಶತಕ ಗಳಿಸಿದ್ದರು. ಅವರ ಈ ಇನಿಂಗ್ಸ್ ನೋಡಿ ಫ್ಯಾನ್ಸ್ ಅನಿಲ್ ಕುಂಬ್ಳೆಯವರನ್ನು ನೆನಪಿಸಿದ್ದಾರೆ. ಈ ಹಿಂದೆ ಅನಿಲ್ ಕುಂಬ್ಳೆ ಕೂಡಾ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಗಲ್ಲಕ್ಕೆ ಗಾಯವಾದರೂ ಬ್ಯಾಂಡೇಜ್ ಕಟ್ಟಿಕೊಂಡು ಮೈದಾನಕ್ಕಿಳಿದಿದ್ದನ್ನು ಇಂದಿಗೂ ಕ್ರಿಕೆಟ್ ಜಗತ್ತು ನೆನಪಿಸುತ್ತದೆ. ಇದೀಗ ರಿಷಭ್ ಪಂತ್ ಕೂಡಾ ಇದೇ ರೀತಿಯ ಹೋರಾಟದ ಮನೋಭಾವ ತೋರಿದ್ದಾರೆ. ಕೆಲವು ಸಮಯದ ಹಿಂದೆ ರೋಹಿತ್ ಶರ್ಮಾ ಕೂಡಾ ಬಾಂಗ್ಲಾದೇಶದಲ್ಲಿ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಇದೇ ರೀತಿ ಗಾಯವಾಗಿದ್ದರೂ ಆಡಿದ್ದರು. ಆಗ ಅವರ ಹೆಬ್ಬೆರಳಿಗೆ ಗಾಯವಾಗಿತ್ತು. ಹಾಗಿದ್ದರೂ ಕೊನೆಯ ಕ್ರಮಾಂಕದಲ್ಲಿ ಬಂದು ಅರ್ಧಶತಕ ಸಿಡಿಸಿ ತಂಡಕ್ಕೆ ಸೋಲು ತಪ್ಪಿಸಲು ಇನ್ನಿಲ್ಲದ ಸಾಹಸ ಮಾಡಿದ್ದರು. ಆದರೆ ಸೋಲು ತಪ್ಪಿಸಲಾಗಲೇ ಇಲ್ಲ. ಆದರೆ ರೋಹಿತ್ ಎಲ್ಲರ ಹೃದಯ ಗೆದ್ದಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ