ವಿಶಾಖಪಟ್ಟಣ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಶತಕ ಗಳಿಸಿ ವಿಂಡೀಸ್ ಬೌಲರ್ ಗಳನ್ನು ಕಾಡಿಸಿದರು.
ಕೊಂಚ ನಿಧಾನಗತಿಯ ಆರಂಭ ಮಾಡಿದರೂ ಇಬ್ಬರ ದ್ವಿಶತಕದ ಜತೆಯಾಟದಿಂದಾಗಿ ಭಾರತದ ಬೃಹತ್ ಮೊತ್ತಕ್ಕೆ ಮುನ್ನುಡಿ ಸಿಕ್ಕಿದೆ. ಇತ್ತೀಚೆಗಿನ ವರದಿ ಬಂದಾಗ ಭಾರತ 2 ವಿಕೆಟ್ ನಷ್ಟಕ್ಕೆ 37 ಓವರ್ ಗಳಲ್ಲಿ 231 ರನ್ ಗಳಿಸಿದೆ.
ಆರಂಭದಿಂದಲೂ ಕೊಂಚ ನಿಧಾನಗತಿಯಲ್ಲಿ ಆಟವಾಡಿದ ರೋಹಿತ್ ಶರ್ಮಾ ವೈಯಕ್ತಿಕ ಮೊತ್ತ 85 ರ ಗಡಿ ದಾಟಿದ ಮೇಲಷ್ಟೇ ತಮ್ಮ ನ್ಯಾಚುರಲ್ ಹೊಡೆತಗಳಿಗೆ ಕೈ ಹಾಕಿದರು. ಇದಕ್ಕೂ ಮೊದಲು ರೋಹಿತ್ ಗೆ ಹೆಟ್ ಮ್ಯಾರ್ ಕಡೆಯಿಂದ ಜೀವದಾನವೂ ಸಿಕ್ಕಿತ್ತು. ಅಲ್ಲದೆ, ಎಂದಿನಂತೆ ತಮ್ಮ ಶಾಟ್ ಹೊಡೆಯಲಾಗದೇ ಕೆಲವೊಮ್ಮೆ ಹತಾಶೆ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಹಾಗಿದ್ದರೂ ತಾಳ್ಮೆಯ ಆಟವಾಡಿ ಶತಕ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನೊಂದೆಡೆ ಕೆಎಲ್ ರಾಹುಲ್ ಆರಂಭದಿಂದಲೂ ಆಕ್ರಮಣಕಾರಿಯಾಗಿ ಆಡುತ್ತಿದ್ದರು. ಮೊದಲು ಅರ್ಧಶತಕ ಪೂರೈಸಿದ್ದು ರಾಹುಲ್. ಹಾಗಿದ್ದರೂ ಶತಕದ ವಿಚಾರದಲ್ಲಿ ರೋಹಿತ್ ಮುಂದೆ ಹೆಜ್ಜೆ ಹಾಕಿದರು. ಹೆಚ್ಚಾಗಿ ಅರ್ಧಶತಕ ಗಳಿಸಿದ ಮೇಲೆ ಔಟಾಗುವ ದುರಾದೃಷ್ಟವಿದ್ದರಿಂದಲೋ ಏನೋ ರಾಹುಲ್ 90 ರ ಗಡಿ ದಾಟಿದ ಮೇಲೆ ಕೊಂಚ ಎಚ್ಚರಿಕೆಯ ಆಟವಾಡಿದರು. ಕೊನೆಗೂ ಶತಕ ಗಳಿಸಿದಾಗ ಅವರ ಮುಖದಲ್ಲಿ ನಿರಮ್ಮಳತೆ ಎದ್ದು ಕಾಣುತ್ತಿತ್ತು. ಮೈದಾನದಲ್ಲೇ ಎರಡೂ ಕಿವಿ ಹಿಡಿದುಕೊಂಡು ಪ್ರಾರ್ಥಿಸಿ ಶತಕದ ಸಂಭ್ರಮ ಆಚರಿಸಿಕೊಂಡರು. ವಿಪರ್ಯಾಸವೆಂದರೆ 102 ರನ್ ಗಳಿಗೆ ರಾಹುಲ್ ವಿಕೆಟ್ ಒಪ್ಪಿಸಿ ನಡೆದರು. ಇವರ ಹಿಂದೆಯೇ ನಾಯಕ ಕೊಹ್ಲಿ ಕೂಡಾ ಶೂನ್ಯಕ್ಕೆ ನಿರ್ಗಮಿಸಿದ್ದು ಭಾರತಕ್ಕೆ ಆಘಾತ ತಂದಿದೆ.