ರಾಯಲ್ ಚಾಲೆಂಜರ್ಸ್ ಬಗ್ಗುಬಡಿದ ವಾರ್ನರ್ ಪಡೆ

ಮಂಗಳವಾರ, 14 ಏಪ್ರಿಲ್ 2015 (11:55 IST)
ಚಿನ್ನಸ್ವಾಮಿ ಕ್ರೀಡಾಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ವಾರ್ನರ್ ಪಡೆ ಭರ್ಜರಿ ಜಯ ಗಳಿಸಿದೆ.

ಪರಿಣಾಮ ಸೋಮವಾರ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 8 ವಿಕೆಟ್‍ಗಳಿಂದ ಗೆಲವು ದಾಖಲಿಸಿತು. ಪಂದ್ಯಕ್ಕೂ ಮುನ್ನ ಮಳೆ ಸುರಿದಿದ್ದ ಪರಿಣಾಮ ಪಂದ್ಯ ರದ್ದಾಗುವ ಭೀತಿ ಕಾಡಿತ್ತು. ಆದರೆ, ಪಂದ್ಯ ಶುರುವಾಗಿ ಪ್ರೇಕ್ಷಕರು ನಿಟ್ಟುಸಿರು ಬಿಡುವಂತಾಯಿತು. ಟಾಸ್ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 19.5 ಓವರ್‍ಗಳಲ್ಲಿ 166 ರನ್‍ಗಳಿಗೆ ಸರ್ವಪತನ ಕಂಡಿತು. ಈ ಮೊತ್ತವನ್ನು ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್ ತಂಡ 17.2 ಓವರ್‍ಗಳಲ್ಲಿ 2 ವಿಕೆಟ್‍ಗೆ 172 ರನ್ ಗಳಿಸಿ ಜಯ ದಾಖಲಿಸಿತು. ಭರ್ಜರಿ ಆರಂಭ, ನಂತರ ಕುಸಿತ: ಭರ್ಜರಿ ಹೊಡತಗಳಿಗೆ ಹೆಸರುವಾಸಿಯಾದ ಆರ್‌ಸಿಬಿಯ ಆರಂಭಿಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಇನಿಂಗ್ಸ್ ಗೆ ಉತ್ತಮ ಆರಂಭ ನೀಡಿದರು. ಆದರೆ ನಂತರದ ಹಂತದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಶಿಸ್ತು ಬದ್ಧ ಬೌಲಿಂಗ್ ದಾಳಿ ಸಂಘಟಿಸುವ ಮೂಲಕ ಆತಿಥೇಯರಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಯಿತು. 16 ಎಸೆತಗಳಲ್ಲಿ 21 ರನ್ ದಾಖಲಿಸಿ ಉತ್ತಮವಾಗಿ ಆಡುತ್ತಿದ್ದ ಕ್ರಿಸ್ ಗೇಯ್ಲ್ ಗೆ ಪ್ರವೀಣ್ ಕುಮಾರ್ ಪೆವಿಲಿಯನ್ ಹಾದಿ ತೋರಿದರು.

ನಂತರ ಬಂದ ದಿನೇಶ್ ಕಾರ್ತಿಕ್ ಅನಗತ್ಯ ಹೊಡೆತಗಳಿಗೆ ಮುಂದಾಗಿ ವಿಕೆಟ್ ಒಪ್ಪಿಸಿದರು. ತಂಡ ಎರಡು ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ಆರ್‌ಸಿಬಿ ತಂಡದ ರನ್ ರೇಟ್ ನಿಧಾನವಾಗಿ ಕೆಳಗಿಳಿಯಿತು. ಈ ವೇಳೆ, 41 ರನ್ ಗಳಿಸಿ ಭರವಸೆ ಮೂಡಿಸಿದ್ದ ನಾಯಕ ವಿರಾಟ್ ಕೊಹ್ಲಿ ಗಟ್ಟಿಯಾಗಿ ನಿಲ್ಲದೆ ಇನಿಂಗ್ಸ್‍ನ 12ನೇ ಓವರ್‍ನಲ್ಲಿ ವಿಕೆಟ್ ಒಪ್ಪಿಸಿದ್ದು ಆರ್‌ಸಿಬಿಗೆ ಮತ್ತೊಂದು ಪೆಟ್ಟು ನೀಡಿತು. ಅವರ ಹಿಂದೆಯೇ ಮಂದೀಪ್ ಸಿಂಗ್ ಶೂನ್ಯ ಸಂಪಾದಿಸಿ ಹೊರ ನಡೆದರೆ, ಡಾರೆನ್ ಸಾಮಿ ಕೇವಲ 6 ರನ್‍ಗೆ ತಮ್ಮ ಇನಿಂಗ್ಸ್‍ಗೆ ತೆರೆ ಎಳೆದುಕೊಂಡರು. ಮಹತ್ವದ ಹಂತದಲ್ಲಿ ನಿರಂತರವಾಗಿ ವಿಕೆಟ್ ಕಳೆದುಕೊಂಡಿದ್ದು, ಆತಿಥೇಯ ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಯಿತು.

ಇನಿಂಗ್ಸ್ ಕಟ್ಟಿದ ಡಿವಿಲಿಯರ್ಸ್: ಒತ್ತಡದ ನಡುವೆಯೇ ತಮ್ಮ ಬ್ಯಾಟಿಂಗ್ ಕರಾಮತ್ತು ತೋರಿದ ಎಬಿ ಡಿವಿಲಿಯರ್ಸ್ 28 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್‍ಗಳ ನೆರವಿನಿಂದ 46 ರನ್ ದಾಖಲಿಸಿದರು. ಒಂದೆಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ ಇನಿಂಗ್ಸ್ ಕಟ್ಟುವ ಜವಾಬ್ದಾರಿ ಹೊತ್ತ ಎಬಿ ಡಿವಿಲಿಯರ್ಸ್ ತಂಡದ ಮೊತ್ತವನ್ನು 150ರ ಗಡಿ ದಾಟುವಂತೆ ನೋಡಿಕೊಂಡರು. ಹಾಗಾಗಿ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಲು ಸಾಧ್ಯವಾಯಿತು. ಉಳಿದಂತೆ ಆರ್‌ಸಿಬಿ ಪರ ಸೀನ್ ಅಬ್ಬಾಟ್ 14, ಹರ್ಷದ್ ಪಟೇಲ್ 2, ಅಬು ನಚೀಮ್ 4, ವರುಣ್ ಅರುಣ್ 6 ರನ್ ಗಳಿಸಿ ಔಟಾಗುವುದರೊಂದಿಗೆ ಇನಿಂಗ್ಸ್ 1 ಎಸೆತ ಬಾಕಿ ಇರುವಂತೆಯೇ ಮುಕ್ತಾಯಗೊಂಡಿತು.

ಹೈದರಾಬಾದ್ ತಂಡದ ಪರ ಟ್ರೆಂಟ್ ಬೌಲ್ಟ್ 3, ಭುವನೇಶ್ವರ್ 2, ಬೊಪಾರ 2, ಪ್ರವೀಣ್ ಕುಮಾರ್, ಕರಣ್ ಶರ್ಮಾ ಹಾಗೂ ಆಶಿಶ್ ರೆಡ್ಡಿ ತಲಾ 1 ವಿಕೆಟ್ ಪಡೆದರು.

ವಾರ್ನರ್ ಅಬ್ಬರಕ್ಕೆ ನಲುಗಿದ ಆರ್‌ಸಿಬಿ: ಬ್ಯಾಟಿಂಗ್‍ಗೆ ಸಹಕಾರಿಯಾಗುವ ಚಿನ್ನಸ್ವಾಮಿ ಅಂಗಣದಲ್ಲಿ ಆರ್‌ಸಿಬಿ ತಂಡ ನೀಡಿದ ಸವಾಲು ಹೈದರಾಬಾದ್ ತಂಡಕ್ಕೆ ಕಠಿಣವೆನಿಸಲಿಲ್ಲ. ಹೈದರಾಬಾದ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಡೇವಿಡ್ ವಾರ್ನರ್ ತಮ್ಮ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ವಾರ್ನರ್ ಅಬ್ಬರಕ್ಕೆ ಆರ್‌ಸಿಬಿ ಬೌಲರ್ಗಳು ಅಕ್ಷರಶಃ ನಲುಗಿ ಹೋದರು. ಇವರಿಗೆ ಶಿಖರ್ ಧವನ್ ಉತ್ತಮ ಸಾಥ್ ನೀಡುವ ಮೂಲಕ ತಂಡಕ್ಕೆ ಭದ್ರ ಬುನಾದಿ ದೊರೆಯಿತು.

7.4 ಓವರ್‍ ಗೆ 82 ರನ್ ದಾಖಲಿಸಿದ ಈ ಜೋಡಿ ಪಂದ್ಯ ತಮ್ಮ ತಂಡದ ಕಡೆ ವಾಲುವಂತೆ ಮಾಡಿತು. 27 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್ಗಳೊಂದಿಗೆ 57 ರನ್ ದಾಖಲಿಸಿದ ವಾರ್ನರ್ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದರು. 8ನೇ ಓವರ್‍ನಲ್ಲಿ ವಾರ್ನರ್ ನಿರ್ಗಮಿಸಿದ ನಂತರ, ಇನಿಂಗ್ಸ್ ಜವಾಬ್ದಾರಿ ಹೊತ್ತ ಶಿಖರ್ ಧವನ್ ಕೊನೆಯವರೆಗೂ ಅಜೇಯರಾಗುಳಿದು ಅರ್ಧ ಶತಕ ಗಳಿಸಿದರಲ್ಲದೆ, ತಮ್ಮ ತಂಡಕ್ಕೆ ಜಯ ತಂದರು. ಅವರಿಗೆ ಉತ್ತಮ ಸಾಥ್ ನೀಡಿದ ಕನ್ನಡಿಗ ಕೆ.ಎಲ್. ರಾಹುಲ್ ಮುರಿಯದ 3ನೇ ವಿಕೆಟ್‍ಗೆ ಅರ್ಧಶತಕದ (78) ಜತೆಯಾಟ ನೀಡಿದರು. ಆರ್‌ಸಿಬಿ ತಂಡದ ಪರ ಯುಜ್ವೇಂದ್ರ ಚಾಹಲ್ 2 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.

ವೆಬ್ದುನಿಯಾವನ್ನು ಓದಿ