ಮುಸ್ತಫಿಜುರ್ ರಹಮಾನ್ ಘಟನೆಯಲ್ಲಿ ಧೋನಿಯದ್ದು ತಪ್ಪಿಲ್ಲ: ರವಿ ಶಾಸ್ತ್ರಿ

ಶನಿವಾರ, 20 ಜೂನ್ 2015 (17:49 IST)
ಭಾರತದ ಏಕದಿನ ನಾಯಕ ಧೋನಿ ಯುವ ವೇಗಿ ಮುಸ್ತಫಿಜುರ್ ರಹಮಾನ್ ಅವರನ್ನು ತಳ್ಳಿದ್ದಕ್ಕಾಗಿ  ಬಾಂಗ್ಲಾದೇಶದಲ್ಲಿ ತೀವ್ರ ಟೀಕಾಪ್ರವಾಹಕ್ಕೆ ಗುರಿಯಾಗಿದ್ದಾರೆ. ಆದರೆ ಟೀಂ ನಿರ್ದೇಶಕ ರವಿ ಶಾಸ್ತ್ರಿ ಧೋನಿಯ ನಡವಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಧೋನಿಗೆ ಬೇರಾವ ಆಯ್ಕೆಯೂ ಇರದಿದ್ದರಿಂದ ಅವರು ಮಾಡಿದ್ದರಲ್ಲಿ ಏನೂ ತಪ್ಪಿಲ್ಲ ಎಂದು ಹೇಳಿದ್ದಾರೆ. 
 
ಧೋನಿ ವಾಸ್ತವವಾಗಿ ಪ್ರಮುಖ ಅವಘಡವಾಗುವುದನ್ನು ತಪ್ಪಿಸಿದ್ದಾರೆ ಎಂದು ರವಿಶಾಸ್ತ್ರಿ ವಿಶ್ಲೇಷಿಸಿದ್ದು, ನೀವು ವಿಡಿಯೋ ದೃಶ್ಯಾವಳಿ ನೋಡಿದರೆ, ಧೋನಿ ತಮ್ಮ ಬ್ಯಾಟನ್ನು ದೂರ ತೆಗೆದುಕೊಂಡು ಹೋಗಿ ಬೌಲರ್‌ಗೆ ಪೆಟ್ಟಾಗುವುದರಿಂದ ತಪ್ಪಿಸಿದರು. ಇಲ್ಲದಿದ್ದರೆ ಬೌಲರ್ ಗಾಯಗಳಿಂದಾಗಿ 3-4 ತಿಂಗಳು ಆಟದಿಂದ ಹೊರಗಿರಬೇಕಿತ್ತು ಎಂದು ರವಿ ಶಾಸ್ತ್ರಿ ವಿಶ್ಲೇಷಿಸಿದರು.
 
ಆದರೆ ಪ್ರಕರಣದ ವಿಚಾರಣೆ ಬಳಿಕ ಬೆಂಕಿಗೆ ಇಂಧನ ಸುರಿದ ಬಿಸಿಬಿ ಅಧ್ಯಕ್ಷ ನಜ್ಮುಲ್ ಹಸನ್ ಧೋನಿ ಮಾಡಿದ ಕೃತ್ಯವನ್ನು  ಅವರ ಸ್ಥಾನಮಾನದ ವ್ಯಕ್ತಿಯಿಂದ ನಿರೀಕ್ಷಿಸಿರಲಿಲ್ಲ ಎಂದು ಹೇಳುತ್ತಾ ರೆಹಮಾನ್ ಅವರನ್ನು ಉದ್ದೇಶಪೂರ್ವಕವಾಗಿ ತಳ್ಳಿದರೆಂದು ಆರೋಪಿಸಿದ್ದಾರೆ. ನಾವು ಸ್ನೇಹತ್ವ ವೃದ್ಧಿಗೆ ಆಡುತ್ತೇವೆ. ಆದರೆ ಮನಸ್ಸಿನಲ್ಲಿ ಸೇಡು ತುಂಬಿದವರು ಮಾತ್ರ ಆ ರೀತಿ ಮಾಡುತ್ತಾರೆ ಎಂದು ಅವರು ಧೋನಿಯನ್ನು ಟೀಕಿಸಿದರು. 

ವೆಬ್ದುನಿಯಾವನ್ನು ಓದಿ