ಟೀಂ ಇಂಡಿಯಾ ವಿರುದ್ಧ ದ.ಆಫ್ರಿಕಾ ಮಾಡಿದ ದಾಖಲೆಗಳೇನೇನು ಗೊತ್ತಾ?

ಶುಕ್ರವಾರ, 10 ಜೂನ್ 2022 (08:20 IST)
ನವದೆಹಲಿ: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯವನ್ನು ದ.ಆಫ್ರಿಕಾ 7 ವಿಕೆಟ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ. ಇದರೊಂದಿಗೆ ಹಲವು ದಾಖಲೆಗಳು ಆಫ್ರಿಕಾ ಪಾಲಾಗಿವೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 211 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಈ ಮೊತ್ತವನ್ನು ದ.ಆಫ್ರಿಕಾ 19.1 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 212 ರನ್ ಗಳಿಸುವ ಮೂಲಕ ಗುರಿ ತಲುಪಿತು. ಆಫ್ರಿಕಾ ಪರ ಬಿರುಸಿನ ಆಟವಾಡಿದ ಡೇವಿಡ್ ಮಿಲ್ಲರ್ 31 ಎಸೆತಗಳಲ್ಲಿ 64 ರನ್ ಚಚ್ಚಿದರೆ ಅವರಿಗೆ ತಕ್ಕ ಸಾಥ್ ನೀಡಿದ ವಾನ್ ಡೀರ್ ದಸೆನ್ ಅಜೇಯ 75 ರನ್ ಗಳಿಸಿದರು. ಇವರಿಬ್ಬರ ಜೊತೆಯಾಟವೇ ಭಾರತಕ್ಕೆ ಮುಳುವಾಯಿತು. ಅಲ್ಲದೆ ಪ್ರಮುಖ ಬೌಲರ್ ಗಳೇ ವಿಕೆಟ್ ಕೀಳಲು ವಿಫಲರಾದರು. ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅಕ್ಸರ್ ಪಟೇಲ್ ತಲಾ 1 ವಿಕೆಟ್ ತಮ್ಮದಾಗಿಸಿಕೊಂಡರು.

ಈ ಗೆಲುವಿನೊಂದಿಗೆ ದ.ಆಫ್ರಿಕಾ ಗರಿಷ್ಠ ರನ್ ಚೇಸ್ ಮಾಡಿದ ದಾಖಲೆ ಮಾಡಿತು. ಅಲ್ಲದೆ ಭಾರತದ ವಿರುದ್ಧ ಯಾವುದೇ ತಂಡ ಟಿ20 ಕ್ರಿಕೆಟ್ ನಲ್ಲಿ ಚೇಸ್ ಮಾಡಿದ ಗರಿಷ್ಠ ರನ್ ಇದಾಗಿದೆ. ಟೀಂ ಇಂಡಿಯಾ ಸತತವಾಗಿ 12 ಪಂದ್ಯಗಳ ಗೆಲುವಿನ ಸರಪಳಿ ಮುರಿದುಕೊಂಡು ವಿಶ್ವದಾಖಲೆ ಮಾಡುವ ಅವಕಾಶ ಕೈ ಚೆಲ್ಲಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ