ಹೈದರಾಬಾದ್: ಭಾರತದ ಟೆನಿಸ್ ಬೆಡಗಿ ಸಾನಿಯಾ ಮಿರ್ಜಾ ತನ್ನ ಪತಿ ಶೊಯೇಬ್ ಮಲಿಕ್ ಸಾಧನೆ ಮೆಚ್ಚಿ ಟ್ವಿಟರ್ ನಲ್ಲಿ ಹೊಗಳಿದ್ದಾರೆ.
ಸಾನಿಯಾ ಪತಿ, ಪಾಕಿಸ್ತಾನ ಕ್ರಿಕೆಟಿಗ ಶೊಯೇಬ್ ಮಲಿಕ್ ಜಿಂಬಾಬ್ವೆ ವಿರುದ್ಧ ತ್ರಿಕೋನ ಟಿ20 ಸರಣಿಯ ಪಂದ್ಯದಲ್ಲಿ ಚುಟುಕು ಕ್ರಿಕೆಟ್ ನಲ್ಲಿ 2000 ರನ್ ಪೂರೈಸಿದ ದಾಖಲೆ ಮಾಡಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೂರನೇ ಕ್ರಿಕೆಟಿಗ ಎಂಬ ಹಿರಿಮೆಗೆ ಪಾತ್ರರಾದರು.
ಮಲಿಕ್ 2000 ರನ್ ಮಾಡಲು 99 ಟಿ20 ಪಂದ್ಯಗಳು ಬೇಕಾಯಿತು. ಈ ಸಾಧನೆಗೆ ಖುಷಿಯಾದ ಸಾನಿಯಾ ‘ಯೇ.. ಮ್ಯಾನ್..’ ಎಂದು ಖುಷಿಯಿಂದ ಅಭಿನಂದಿಸಿದ್ದಾರೆ.
ವಿಶೇಷವೆಂದರೆ ಭಾರತದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ 2000 ರನ್ ಗಳ ಹೊಸ್ತಿಲಲ್ಲಿದ್ದಾರೆ. ಕೊಹ್ಲಿ ಇದೀಗ 55 ಪಂದ್ಯಗಳನ್ನಾಡಿದ್ದು, 2000 ರನ್ ಪೂರ್ತಿ ಮಾಡಲು 9 ರನ್ ಗಳು ಬೇಕಾಗಿದೆ. ಒಂದು ವೇಳೆ ಇಂಗ್ಲೆಂಡ್ ಸರಣಿಯಲ್ಲಿ ಕೊಹ್ಲಿ ಈ ಸಾಧನೆ ಮಾಡಿದರೆ ಅತೀ ವೇಗದ 2000 ರನ್ ಪೂರೈಸಿದ ಮೊದಲ ಬ್ಯಾಟ್ಸ್ ಮನ್ ಎಂಬ ದಾಖಲೆಗೆ ಪಾತ್ರರಾಗಲಿದ್ದಾರೆ. ಇನ್ನೊಂದೆಡೆ ರೋಹಿತ್ ಶರ್ಮಾ ಕೂಡಾ 1949 ರನ್ ಗಳೊಂದಿಗೆ ಹಿಂದೆಯೇ ಇದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.