ಡುಬ್ಲಿನ್: ಐರ್ಲೆಂಡ್ ವಿರುದ್ಧ ಟಿ20 ಸರಣಿ ಗೆದ್ದ ಮೇಲೆ ಪತ್ರಿಕಾಗೋಷ್ಠಿಗೆ ಬರುವಾಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುಖದಲ್ಲಿ ಖುಷಿಯ ಬದಲು ಚಿಂತೆಯೇ ಜಾಸ್ತಿಯಿತ್ತು.
ಅವರ ಚಿಂತೆಗೆ ಕಾರಣ ತಂಡದ ಆಯ್ಕೆ ಪ್ರಕ್ರಿಯೆ. ಐರ್ಲೆಂಡ್ ವಿರುದ್ಧ ಎರಡೂ ಪಂದ್ಯಗಳಲ್ಲಿ ಬೇರೆ ಬೇರೆ ಆಟಗಾರರನ್ನು ಆಡಿಸಿ ಯಶಸ್ವಿಯಾದ ಬಳಿಕ ಕೊಹ್ಲಿಗೆ ಈಗ ಯಾರನ್ನು ಆಯ್ಕೆ ಮಾಡುವುದು, ಯಾರನ್ನು ಬಿಡುವುದು ಎಂಬ ತಲೆನೋವು ಶುರುವಾಗಿದೆಯಂತೆ.
ಇದನ್ನೇ ಅವರು ಪತ್ರಕರ್ತರ ಎದುರು ಹಂಚಿಕೊಂಡಿದ್ದಾರೆ. ‘ಎಲ್ಲರೂ ಬ್ಯಾಟ್ ನಿಂದ ಉತ್ತಮ ಕೊಡುಗೆ ನೀಡಿದ್ದಾರೆ. ಈಗ ನನಗೆ ಯಾರನ್ನು ಆಯ್ಕೆ ಮಾಡಬೇಕೆಂಬ ಸಿಹಿಯಾದ ತಲೆನೋವು ಶುರುವಾಗಿದೆ. ಇದು ಭಾರತೀಯ ಕ್ರಿಕೆಟ್ ಗೆ ಒಳ್ಳೆಯದೇ. ನಮ್ಮ ಹುಡುಗರು ತಮಗೆ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಇದುವೇ ಸಾಕ್ಷಿ’ ಎಂದು ಎರಡನೇ ಟಿ20 ಪಂದ್ಯದ ಯಶಸ್ಸಿನ ಬಳಿಕ ಕೊಹ್ಲಿ ಹೇಳಿಕೊಂಡಿದ್ದಾರೆ.
ಈ ಪಂದ್ಯಕ್ಕೂ ಮೊದಲೇ ಕೊಹ್ಲಿ ತಮ್ಮ ಬೆಂಚ್ ಹುಡುಗರ ಸಾಮರ್ಥ್ಯ ಒರೆಗೆ ಹಚ್ಚುವುದಾಗಿ ಹೇಳಿಕೊಂಡಿದ್ದರು. ಹೀಗಾಗಿ ದ್ವಿತೀಯ ಟಿ20 ಪಂದ್ಯದಲ್ಲಿ ರಾಹುಲ್, ಹೊಸ ಹುಡುಗ ಸಿದ್ಧಾರ್ಥ್ ಕೌಲ್ ಮುಂತಾದವರು ಅವಕಾಶ ಗಿಟ್ಟಿಸಿದ್ದಷ್ಟೇ ಅಲ್ಲ, ಭರ್ಜರಿ ಆಟವಾಡಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.