ಶ್ರೀಲಂಕಾ ಆಟಗಾರರನ್ನು ರಕ್ಷಿಸಿದ ಚಾಲಕ ಈಗ ಬಸ್‌ಗಳ ಮಾಲೀಕ

ಶುಕ್ರವಾರ, 22 ಮೇ 2015 (18:04 IST)
2009ರಲ್ಲಿ ನಡೆದ ಭಯೋತ್ಪಾದನೆ ದಾಳಿಯಿಂದ ಶ್ರೀಲಂಕಾ ಕ್ರಿಕೆಟ್ ತಂಡವನ್ನು ಪಾರು ಮಾಡಿದ ಬಸ್ ಚಾಲಕ ಮೆಹರ್ ಖಲೀಲ್ ಖ್ಯಾತಿ ಮತ್ತು ಯಶಸ್ಸು ಎರಡನ್ನೂ ಗಳಿಸಿದರು. ಈ ಘಟನೆಯನ್ನು ದುರಂತ ಎಂದು ಕರೆದ ಬಸ್ ಚಾಲಕ  ಅದನ್ನು ಮರೆಯುವುದೇ ಒಳ್ಳೆಯದು ಎಂದು ಉದ್ಗರಿಸಿದ್ದಾರೆ. 2009ರಲ್ಲಿ  ಶ್ರೀಲಂಕಾ ಕ್ರಿಕೆಟ್ ತಂಡದ ಬಸ್ ಖಲೀಲ್ ಚಾಲನೆ ಮಾಡುವಾಗ ಉಗ್ರಗಾಮಿಗಳು ರಾಕೆಟ್ ಲಾಂಚರ್ ಮತ್ತು ಮೆಷಿನ್ ಗನ್ ಮೂಲಕ ದಾಳಿ ಮಾಡಿದ್ದರಿಂದ 8 ಜನರು ಸತ್ತಿದ್ದರು ಮತ್ತು ಏಳು ಮಂದಿ ಗಾಯಗೊಂಡಿದ್ದರು. 
 
 ಈ ದಾಳಿಯ ಬಳಿಕ ಪಾಕ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ತೆರೆಬಿದ್ದಿತ್ತು. 6 ವರ್ಷಗಳ ಬಳಿಕ  ಜಿಂಬಾಬ್ವೆ ಲಾಹೋರ್‌ನಲ್ಲಿ ಕಿರುಸರಣಿಗಾಗಿ ಪ್ರವಾಸ ಕೈಗೊಂಡಿದ್ದು, ಅಭೂತಪೂರ್ವ ಭದ್ರತೆಯನ್ನು ಅವರಿಗೆ ಒದಗಿಸಲಾಗಿದೆ. 
 
2009ರ ಮಾರ್ಚ್ 3ರಂದು ನಡೆದ ದುರ್ಘಟನೆ ನೆನಪಿಸಿಕೊಂಡರೆ ಖಲೀಲ್ ಈಗಲೂ ಭಯವಿಹ್ವಲರಾಗುತ್ತಾರೆ. ಉಗ್ರಗಾಮಿಗಳು ದಾಳಿ ಆರಂಭಿಸಿದಾಗ ಏನಾಗುತ್ತಿದೆ ಎಂದು ಅರಿಯುವಷ್ಟರಲ್ಲಿ ಕೆಲವು ಕ್ಷಣಗಳು ಹಾದುಹೋಗಿತ್ತು. 
 
 ಆರಂಭದಲ್ಲಿ ಅವರು ಲಾಹೋರಿಗಳಾಗಿದ್ದು, ಪಟಾಕಿ ಹೊಡೆಯುತ್ತಿರಬಹುದೆಂದು ಖಲೀಲ್ ಭಾವಿಸಿದ್ದರು. "ಆದರೆ ಇಬ್ಬರು ನನ್ನೆದುರು ಬಂದು ಗುಂಡು ಹಾರಿಸಿದಾಗ ಬೆಚ್ಚಿಬಿದ್ದೆ. ಆಟಗಾರರು ''ಹೋಗು, ಹೋಗು'' ಎಂದು ಕೂಗಿದಾಗ ನನ್ನ ದೇಹದ ನರನಾಡಿಗಳಲ್ಲಿ 440 ವೋಲ್ಟ್ ವಿದ್ಯುತ್ ಹರಿದಂತೆ ಭಾಸವಾಗಿ ವೇಗವಾಗಿ ವಾಹನ ಚಲಾಯಿಸಿದ್ದೆ. ಟೀಂ ಹೊಟೆಲ್‌ನಿಂದ ಬರುವಾಗ ಸುಮಾರು 10ರಿಂದ 12 ಜನರು ಗುಂಡಿನ ದಾಳಿ ಮಾಡಿದ್ದರು. ನಾನು ಆತ್ಮವಿಶ್ವಾಸದಿಂದ ಸ್ಟೇಡಿಯಂ ಕಡೆಗೆ ಗಾಡಿಯನ್ನು ನುಗ್ಗಿಸಿದ್ದೆ" ಎಂದು ಖಲೀಲ್ ಆ ಘಟನೆಯನ್ನು ನೆನಪಿಸಿಕೊಂಡು ಹೇಳಿದರು. 
 
 ಆಟಗಾರರನ್ನು ರಕ್ಷಣೆ ಮಾಡಿದ ಬಳಿಕ ಅವರು ಸ್ವದೇಶಕ್ಕೆ ಹಿಂತಿರುಗಲು ಸುರಕ್ಷಿತ ವಾಯುನೆಲೆಗೆ ಒಯ್ಯಲಾಯಿತು. ''ಒಂದು ತಿಂಗಳಾದ ಬಳಿಕ ಶ್ರೀಲಂಕಾ ಅಧ್ಯಕ್ಷರು ನನ್ನನ್ನು ಆಹ್ವಾನಿಸಿದರು. ನಾನು ಏರ್‌ಪೋರ್ಟ್‌ಗೆ ಹೋದಾಗ ನಾನು ಚಾಲಕ ಮೆಹರ್ ಖಲೀಲ್ ಆಗಿರದೇ ವಿವಿಐಪಿ ಆಗಿದ್ದೆ. ಸರ್ಕಾರ 21,000 ಡಾಲರ್ ಬಹುಮಾನ ನೀಡಿ ಸನ್ಮಾನಿಸಿತು. 
 
ಖಾಸಗಿ ದೇಣಿಗೆಗಳ ಜೊತೆ ಸ್ವಂತ ಬಸ್  ಕಂಪನಿ ಆರಂಭಿಸಿದೆ'' ಎಂದು ಖಲೀಲ್ ಹೇಳಿದರು. ಈi  ಖಲೀಲ್ ಮೂರು ಬಸ್‌ಗಳ ಮಾಲೀಕನಾಗಿದ್ದು, ಲಾಹೋರ್‌ನಿಂದ ಇಸ್ಲಾಮಾಬಾದ್‌ಗೆ ಪ್ರಯಾಣಿಕರನ್ನು ಸಾಗಿಸುತ್ತಾರೆ.   ಶುಕ್ರವಾರ ಅವರು ಜಿಂಬಾಬ್ವೆ ಬಸ್ ಚಾಲನೆ ಮಾಡುವ ಬದಲಿಗೆ ಪ್ರೇಕ್ಷಕರಾಗಿ ಸ್ಟೇಡಿಯಂನಲ್ಲಿ ಕುಳಿತುಕೊಳ್ಳಲಿದ್ದಾರೆ.
 

ವೆಬ್ದುನಿಯಾವನ್ನು ಓದಿ