ಶಮಿ ಮಾರಕ ಬೌಲಿಂಗ್ ದಾಳಿ: ವೆಸ್ಟ್ ಇಂಡೀಸ್ 182ಕ್ಕೆ ಆಲೌಟ್

ಶುಕ್ರವಾರ, 6 ಮಾರ್ಚ್ 2015 (15:35 IST)
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಡಬ್ಲ್ಯುಸಿಎ ಮೈದಾನದಲ್ಲಿ ನಡೆಯುತ್ತಿರುವ ಪೂಲ್ ಬಿನ 28ನೇ ಪಂದ್ಯದಲ್ಲಿ ಮಹಮ್ಮದ್ ಶಮಿ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ವೆಸ್ಟ್ ಇಂಡೀಸ್ ಕೇವಲ 182 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡೀಸ್ ಪರ ಆರಂಭದಲ್ಲೇ ಡೇನ್ ಸ್ಮಿತ್ ಅವರು ಶಮಿ ಎಸೆತದಲ್ಲಿ ಧೋನಿಗೆ ಕ್ಯಾಚಿತ್ತು ಔಟಾದರು.

ಅವರು 27 ಎಸೆತಗಳಲ್ಲಿ 21 ರನ್ ಬಾರಿಸಿದರು. ಸ್ಯಾಮ್ಯುಯೆಲ್ಸ್ ಮೋಹಿತ್ ಶರ್ಮಾ ಬೌಲಿಂಗ್‌ನಲ್ಲಿ ಕೊಹ್ಲಿಗೆ ರನ್ ಔಟ್ ಆದರು.  ನಂತರ ಕ್ರಿಸ್ ಗೇಲ್ ಬಿರುಸಿನಿಂದ ರನ್ ಸ್ಕೋರ್ ಮಾಡಲು ಹೋಗಿ ಶಮಿ ಎಸೆತದಲ್ಲೇ ಮೋಹಿತ್ ಶರ್ಮಾಗೆ ಕ್ಯಾಚಿತ್ತು ಔಟಾದರು. ವೆಸ್ಟ್ ಇಂಡೀಸ್ 8.6 ಓವರುಗಳಲ್ಲಿ 35 ರನ್‌ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿತ್ತು. ಮುಂದಿನ ಓವರಿನಲ್ಲೇ ರಾಮ್ಡಿನ್ ಉಮೇಶ್ ಯಾದವ್‌ಗೆ ಬೌಲ್ಡ್ ಆದರು.

ವೆಸ್ಟ್ ಇಂಡೀಸ್ ಸ್ಕೋರ್ 67 ರನ್‌ಗಳಾಗಿದ್ದಾಗ ಸಿಮ್ಮನ್ಸ್ ಮೋಹಿತ್ ಶರ್ಮಾ ಎಸೆತದಲ್ಲಿ ಉಮೇಶ್‌ಗೆ ಕ್ಯಾಚಿತ್ತು ಔಟಾದರು. ಆಗ ವೆಸ್ಟ್ ಇಂಡೀಸ್ ಸ್ಕೋರ್ 5 ವಿಕೆಟ್ ಕಳೆದುಕೊಂಡು 67 ರನ್‌ಗಳಾಗಿತ್ತು. ಡ್ಯಾರೆನ್ ಸ್ಯಾಮಿ ಶಮಿ ಬೌಲಿಂಗ್‌ನಲ್ಲಿ ಧೋನಿಗೆ ಕ್ಯಾಚಿತ್ತು ಔಟಾದಾಗ ಅವರ ಸ್ಕೋರ್ 55 ಎಸೆತಗಳಲ್ಲಿ 26 ರನ್‌ಗಳಾಗಿತ್ತು. ಜ್ಯಾಸನ್ ಹೋಲ್ಡರ್ ಅವರೊಬ್ಬರೇ ವೆಸ್ಟ್ ಇಂಡೀಸ್ ಪರ ಉತ್ತಮ ಸ್ಕೋರ್ ಕಲೆ ಹಾಕಿ 64ಎಸೆತಗಳಲ್ಲಿ 57 ರನ್ ಸಿಡಿಸಿದರು.

ವೆಸ್ಟ್ ಇಂಡೀಸ್  40 ಓವರುಗಳಲ್ಲಿ 8ವಿಕೆಟ್ ಕಳೆದುಕೊಂಡು 162 ರನ್ ಗಳಿಸಿತ್ತು. ಹೋಲ್ಡರ್ ಔಟಾದ ಬಳಿಕ ಟೇಲರ್ ಮತ್ತು ರೋಚ್ ಕೂಡ ಬೇಗನೇ ಔಟಾಗಿ ವೆಸ್ಟ್ ಇಂಡೀಸ್ 44.2 ಓವರುಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 182 ರನ್ ಗಳಿಸಿದೆ.  ಟೀಂ ಇಂಡಿಯಾ ಪರ ಮಹಮ್ಮದ್ ಶಮಿ ಅವರು ಮಾರಕ ಬೌಲಿಂಗ್ ದಾಳಿ ಮಾಡಿದ್ದು 8 ಓವರುಗಳಲ್ಲಿ 35 ರನ್ ನೀಡಿ 3 ವಿಕೆಟ್ ಕಬಳಿಸಿದ್ದಾರೆ.  ಉಮೇಶ್ ಯಾದವ್ ಮತ್ತು ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಗಳಿಸಿದರೆ ಮೋಹಿತ್ ಶರ್ಮಾ ಮತ್ತು ಅಶ್ವಿನ್ ತಲಾ ಒಂದು ವಿಕೆಟ್ ಕಬಳಿಸಿದರು. 
 

ವೆಬ್ದುನಿಯಾವನ್ನು ಓದಿ