ಶೆಹಜಾದ್ ಅಬ್ಬರದ ಆಟ: ಯುಎಇ ವಿರುದ್ದ 339 ರನ್ ಸಿಡಿಸಿದ ಪಾಕಿಸ್ತಾನ

ಬುಧವಾರ, 4 ಮಾರ್ಚ್ 2015 (10:44 IST)
ಪಾಕಿಸ್ತಾನ ಮತ್ತು ಯುಎಇ ನಡುವೆ ನೇಪಿಯರ್  ಮೆಕ್ಲೀನ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಪೂಲ್ ಬಿ 25ನೇ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ಅಹ್ಮದ್ ಶೆಹಜಾದ್ ಅವರ ಅಬ್ಬರದ 93 ಮತ್ತು ಸೊಹೇಲ್  ಅವರ 70 ರನ್ ಮತ್ತು ಮಿಶಬ್ ಉಲ್ ಹಕ್  ಅವರ 65 ರನ್‌ಗಳ ನೆರವಿನಿಂದ 339 ರನ್ ಬೃಹತ್ ಮೊತ್ತವನ್ನು ದಾಖಲಿಸಿದೆ. ಯುಎಇ ಪರ ಮಂಜುಳಾ ಗುರುಗೆ 56 ರನ್ ನೀಡಿ 4 ವಿಕೆಟ್ ಕಬಳಿಸಿದರು.

ನವೀದ್ ಒಂದು ವಿಕೆಟ್ ಗಳಿಸಿದರು. ಉಳಿದ ಬೌಲರುಗಳು  ಒಂದೂ ವಿಕೆಟ್ ಗಳಿಸದೇ ನಿರಾಶೆ ಮೂಡಿಸಿದರು. ಪಾಕಿಸ್ತಾನದ ಪರ ಆರಂಭದಲ್ಲೇ ಮಂಜುಳಾ ಗುರುಗೆ ಎಸೆತಕ್ಕೆ ನಸೀರ್ ಜಮ್ಶೇದ್ ಕುರಾಮ್ ಖಾನ್‌ಗೆ ಕ್ಯಾಚಿತ್ತು ಔಟಾದರು. ಹ್ಯಾರಿಸ್ ಸೊಹೇಲ್ ಮತ್ತು ಶೆಹಜಾದ್ ಎರಡನೇ ವಿಕೆಟ್‌ಗೆ 54 ರನ್ ಜೊತೆಯಾಟವಾಡಿದರು. ಶೆಹಜಾದ್ ತಮ್ಮ 11ನೇ ಅರ್ಧಶತಕ ಪೂರೈಸಿದರು.

ಇದಕ್ಕೆ ಮುನ್ನ ಶೆಹಜಾದ್ ಸ್ಕೋರು 8 ಮತ್ತು 11 ರನ್‌ಗಳಿದ್ದಾಗ ಎರಡು ಜೀವದಾನ ಪಡೆದರು. ಸೊಹೇಲ್ ಕಳಪೆ ಶಾಟ್‌‍ಗೆ ಬೆಲೆ ತೆತ್ತು ಶೈಮಾನ್ ಅನ್ವರ್‌ಗೆ ಕ್ಯಾಚಿತ್ತು ಔಟಾದರು. ಮಿಶಬ್ ಉಲ್ ಹಕ್ ಎರಡನೇ ಸತತ ಅರ್ಧಶತಕವನ್ನು ಬಾರಿಸಿದ್ದರಿಂದ ಪಾಕಿಸ್ತಾನ 300 ಗಡಿ ದಾಟಿತು. ನಂತರ ಶಾಹಿದ್ ಅಫ್ರಿದಿ 7 ಎಸೆತಗಳಲ್ಲಿ 21 ರನ್ ಸಿಡಿಸಿ ಪಾಕ್ ಸ್ಕೋರು 6 ವಿಕೆಟ್‌ಗೆ 339 ರನ್ ಮುಟ್ಟಿದೆ.

ವೆಬ್ದುನಿಯಾವನ್ನು ಓದಿ