ಲಂಡನ್: ಪ್ರತಿಷ್ಠಿತ ಚಾಂಪಿಯನ್ಸ್ ಟ್ರೋಫಿಯಲ್ಲಿ ಗೆಲ್ಲುವ ತಂಡಗಳ ಪೈಕಿ ಭಾರತ, ಆಸ್ಟ್ರೇಲಿಯಾ, ದ. ಆಫ್ರಿಕಾಗಳಿತ್ತು. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ಈ ದೈತ್ಯರೇ ದುರ್ಬಲರೆದುರು ಸೋತು ಸುಣ್ಣವಾಗುತ್ತಿದ್ದಾರೆ.
ದೈತ್ಯ ಶಾರ್ಕ್ ನ್ನು ಮೊದಲು ನುಂಗಿದ ಕೀರ್ತಿ ಪಾಕಿಸ್ತಾನದ್ದು. ಭಾರತದ ವಿರುದ್ಧ ಅಷ್ಟು ಹೀನಾಯವಾಗಿ ಸೋತ ಮೇಲೆ ಪಾಕ್ ಇನ್ನು ಟೂರ್ನಿಯಲ್ಲಿ ಮಕಾಡೆ ಮಲಗುವುದು ಗ್ಯಾರಂಟಿ ಎಂದೇ ಎಲ್ಲರೂ ಲೆಕ್ಕಾಚಾರ ಹಾಕಿದ್ದರು. ಆದರೆ ವರುಣನ ಕೃಪೆಯೋ, ಅದೃಷ್ಟದ ಮಹಿಮೆಯೋ ಪಾಕ್ ಆಫ್ರಿಕನ್ನರನ್ನು ಸೋಲಿಸಿ ಸೆಮಿಫೈನಲ್ ಆಸೆ ಜೀವಂತವಾಗಿರಿಸಿತು.
ನಂತರದ ಸರದಿ ಭಾರತದ್ದು. ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯಕ್ಕೂ ಮೊದಲು ಭಾರತವೇ ಫೇವರಿಟ್ ಎನ್ನುವಂತಿತ್ತು. ಆದರೆ 323 ರನ್ ಗಳನ್ನು ಚೇಸ್ ಮಾಡುವಾಗ ಲಂಕಾ ಬ್ಯಾಟ್ಸ್ ಮನ್ ಗಳು ಟೀಂ ಇಂಡಿಯಾದ ಗರ್ವಕ್ಕೇ ಕೊಡಲಿಯೇಟು ನೀಡಿದರು. ಮತ್ತೊಂದು ದೈತ್ಯ ಸಂಹಾರವಾಗುವುದರೊಂದಿಗೆ ಭಾರತ ದ. ಆಫ್ರಿಕಾ ವಿರುದ್ಧದ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿತು.
ಇದಕ್ಕೆ ಮೂರನೇ ಸೇರ್ಪಡೆ ಬಾಂಗ್ಲಾದೇಶ. ಈ ತಂಡ ಯಾವಾಗಲೂ ದೈತ್ಯ ಸಂಹಾರಿ ಎಂದೇ ಪ್ರಚಲಿತ. ಹಿಂದೊಮ್ಮೆ ವಿಶ್ವಕಪ್ ಪಂದ್ಯದಲ್ಲಿ ಭಾರತಕ್ಕೇ ಚಾಕ್ ಕೊಟ್ಟ ಬಾಂಗ್ಲಾ ಹುಡುಗರು ನಿನ್ನೆ ನ್ಯೂಜಿಲೆಂಡ್ ಗೇ ಮಣ್ಣು ಮುಕ್ಕಿಸಿದರು. ಶಕೀಬ್ ಅಲ್ ಹಸನ್ ಮತ್ತು ಮೊಹಮ್ಮದುಲ್ಲಾ ಶತಕ ಬಾರಿಸಿ ತಂಡಕ್ಕೆ ಐದು ವಿಕೆಟ್ ಗಳ ಗೆಲುವು ಒದಗಿಸಿದರು.
ಇದರಿಂದಾಗಿ ಇದೀಗ ಅನಧಿಕೃತವಾಗಿ ಭಾರತ-ದ.ಆಫ್ರಿಕಾ ನಡುವೆ, ಶ್ರೀಲಂಕಾ-ಪಾಕಿಸ್ತಾನ ನಡುವೆ, ಬಾಂಗ್ಲಾದೇಶ-ಇಂಗ್ಲೆಂಡ್ ನಡುವಿನ ಪಂದ್ಯಕ್ಕೆ ಕ್ವಾರ್ಟರ್ ಫೈನಲ್ ನ ಕಳೆ ಬಂದಿದೆ. ಯಾರು ಗೆಲ್ಲುತ್ತಾರೆ ಎನ್ನುವುದರ ಮೇಲೆ ಸೆಮಿಫೈನಲ್ ನಡೆಯಲಿದೆ.