ಬೆಂಗಳೂರು: ಮಹಿಳೆಯರ ಐಪಿಎಲ್ ಗೆ ಇನ್ನು ಕೆಲವೇ ದಿನಗಳು ಬಾಕಿಯಿವೆ. ಇದೀಗ ಆರ್ ಸಿಬಿ ನಾಯಕಿ ಸ್ಮೃತಿ ಮಂಧನಾ ನೀಡಿದ ಹೇಳಿಕೆಯೊಂದು ವೈರಲ್ ಆಗುತ್ತಿದೆ.
ಆರ್ ಸಿಬಿ ನಾಯಕಿ ಸ್ಮೃತಿ ಮಂಧನಾ ಸಂದರ್ಶನವೊಂದರಲ್ಲಿ ಇಲ್ಲಿನ ಅಪ್ಪಟ ಅಭಿಮಾನಿಗಳ ಬಗ್ಗೆ ಹೇಳಿಕೊಂಡಿದ್ದಾರೆ. ಬಹುಶಃ ಐಪಿಎಲ್ ನಲ್ಲಿ ಅತೀ ಹೆಚ್ಚು ವಿಧೇಯ ಅಭಿಮಾನಿಗಳನ್ನು ಹೊಂದಿರುವ ತಂಡ ಎಂದಿದ್ದರೆ ಅದು ಆರ್ ಸಿಬಿ. ತಂಡ ಸೋಲಲಿ, ಗೆಲ್ಲಲಿ ಬೆಂಬಲ, ನಿಷ್ಠೆ ಹೊಂದಿರುವ ಅಭಿಮಾನಿಗಳು ಆರ್ ಸಿಬಿಗಿದ್ದಾರೆ.
ಇದೀಗ ಸ್ಮೃತಿ ಮಂಧನಾ ಅಭಿಮಾನಿಗಳ ಬಗ್ಗೆ ಹೇಳಿಕೊಂಡಿದ್ದಾರೆ. ಡಬ್ಲ್ಯುಪಿಎಲ್ ನಲ್ಲಿ ಆರ್ ಸಿಬಿ ನಾಯಕಿಯಾಗಿರುವ ಸ್ಮೃತಿಗೆ ವಿದೇಶಕ್ಕೆ ಹೋದರೂ ಅಭಿಮಾನಿಗಳು ಈ ಸಲ ಕಪ್ ನಮ್ದೇ ಎಂದು ಚಿಯರ್ ಮಾಡುತ್ತಾರಂತೆ. ಸಂದರ್ಶನವೊಂದರಲ್ಲಿ ಇದನ್ನು ಸ್ಮೃತಿ ಹೇಳಿಕೊಂಡಿದ್ದಾರೆ.
ನಮಗೆ ಕಪ್ ಗೆಲ್ಲಲು ಸಾಧ‍್ಯವಾಗುತ್ತದೋ ಬಿಡುತ್ತೋ. ಆದರೆ ಅಭಿಮಾನಿಗಳು ಮಾತ್ರ ಎಲ್ಲೇ ಹೋದರೂ ಈ ಸಲ ಕಪ್ ನಮ್ದೇ ಅಂತಿರ್ತಾರೆ. ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶಕ್ಕೆ ಹೋದರೂ ಅಲ್ಲಿ ಈ ಸಲ ಕಪ್ ನಮ್ದೇ ಎಂದು ಚಿಯರ್ ಮಾಡುವ ಒಬ್ಬರಾದರೂ ಅಭಿಮಾನಿಗಳು ಇದ್ದೇ ಇರುತ್ತಾರೆ ಎಂದು ಸ್ಮೃತಿ ಹೇಳಿಕೊಂಡಿದ್ದಾರೆ.
ಕಳೆದ ಬಾರಿ ಚೊಚ್ಚಲ ಡಬ್ಲ್ಯುಪಿಎಲ್ ಆವೃತ್ತಿಯಲ್ಲಿ ಆರ್ ಸಿಬಿ ಹೀನಾಯ ಸೋಲು ಕಂಡಿತ್ತು. ದುಬಾರಿ ಬೆಲೆಗೆ ಖರೀದಿ ಮಾಡಿ ನಾಯಕತ್ವ ನೀಡಿದ್ದ ಸ್ಮೃತಿ ಬ್ಯಾಟಿಂಗ್ ನಲ್ಲಿ ಕಳಪೆ ಫಾರ್ಮ್ ಪ್ರದರ್ಶಿಸಿದ್ದರು. ಹಾಗಿದ್ದರೂ ಘಟಾನುಘಟಿಗಳನ್ನು ಹೊಂದಿರುವ ಆರ್ ಸಿಬಿ ಈ ಬಾರಿ ಉತ್ತಮ ಪ್ರದರ್ಶನ ನೀಡಲಿದೆ ಎಂಬ ವಿಶ್ವಾಸದಲ್ಲಿ ಅಭಿಮಾನಿಗಳಿದ್ದಾರೆ. ಫೆಬ್ರವರಿ 23 ರಿಂದ ಮಹಿಳೆಯರ ಐಪಿಎಲ್ ಆರಂಭವಾಗಲಿದೆ.