ದಕ್ಷಿಣ ಆಫ್ರಿಕಾಗೆ 2ನೇ ಟಿ20ಯಲ್ಲೂ ಜಯ: ಬಾಂಗ್ಲಾಗೆ ಸರಣಿ ಸೋಲು

ಮಂಗಳವಾರ, 7 ಜುಲೈ 2015 (16:47 IST)
ಕ್ವಿಂಟನ್ ಡಿ ಕಾಕ್ ಮತ್ತು ಎಬಿ ಡಿವಿಲಿಯರ್ಸ್ ನಡುವೆ 95 ರನ್ ಆರಂಭದ ಜೊತೆಯಾಟದ ನೆರವಿನಿಂದ ದಕ್ಷಿಣ ಆಫ್ರಿಕಾ ಎರಡನೇ ಟ್ವೆಂಟಿ 20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ದ 31 ರನ್ ಜಯಗಳಿಸುವ ಮೂಲಕ ಟಿ20 ಸರಣಿಯನ್ನು ಗೆದ್ದುಕೊಂಡಿದೆ. ಡಿ ಕಾಕ್ 44 ರನ್ ಮತ್ತು ಡಿ ವಿಲಿಯರ್ಸ್ 40 ರನ್ ಬಾರಿಸಿ ಬಾಂಗ್ಲಾ ತಂಡವನ್ನು 2-0ಯಿಂದ ಧೂಳೀಪಟ ಮಾಡಿದೆ. 11ನೇ ಓವರಿನಲ್ಲಿ ಎಡಗೈ ಸ್ಪಿನ್ನರ್ ಅರಾಫತ್ ಸನ್ನಿ ಬೌಲಿಂಗ್‌ನಲ್ಲಿ ಡಿ ಕಾಕ್ ಸಬೀರ್ ರೆಹ್ಮಾನ್‌ಗೆ ಕ್ಯಾಚಿತ್ತು ಔಟಾದರು.
 
 ಡಿಕಾಕ್ ಸ್ಕೋರಿನಲ್ಲಿ ನಾಲ್ಕು ಬೌಂಡರಿಗಳು ಮತ್ತು ಎರಡು ಸಿಕ್ಸರ್‌ಗಳಿದ್ದವು. ನಾಸಿರ್ ಹುಸೇನ್ ಮುಂದಿನ ಓವರಿನಲ್ಲೇ ಎರಡು ವಿಕೆಟ್ ಕಬಳಿಸಿ ದಕ್ಷಿಣ ಆಫ್ರಿಕಾ ರನ್ ವೇಗಕ್ಕೆ ಬ್ರೇಕ್ ಹಾಕಿದರು. ಎರಡನೇ ಎಸೆತದಲ್ಲಿ ಡುಮಿನಿ ಬ್ಯಾಟಿನ ತುದಿಗೆ ಚೆಂಡು ತಾಗಿ ಶಕೀಬ್ ಅಲ್ ಹಸನ್ ಕ್ಯಾಚ್ ಹಿಡಿದರು. ಡಿ ವಿಲಿಯರ್ಸ್ ಮುಂದಿನ ಎಸೆತದಲ್ಲಿ ವಿಕೆಟ್ ಕೀಪರ್ ಮುಷ್‌ಫೀಕುರ್ ರಹೀಮ್‌ಗೆ ಕ್ಯಾಚಿತ್ತು ಔಟಾದರು. ಅವರ ಸ್ಕೋರಿನಲ್ಲಿ 6 ಬೌಂಡರಿಗಳಿದ್ದವು.
 
 ಮಿಲ್ಲರ್ (ಅಜೇಯ 30) ಮತ್ತು ರಿಲೀ ರೊಸೌವ್(ಅಜೇಯ 19) ಕೊನೆಯ ಎರಡು ಓವರಿನಲ್ಲಿ 32 ರನ್ ಬಾರಿಸಿ ದಕ್ಷಿಣ ಆಫ್ರಿಕಾ 4 ವಿಕೆಟ್ ಕಳೆದುಕೊಂಡು 169 ರನ್  ಉತ್ತಮ ಸ್ಕೋರ್ ಕಲೆಹಾಕಲು ನೆರವಾದರು.  ಬಾಂಗ್ಲಾ ಪರ ನಾಸಿರ್ ಹುಸೇನ್ 2 ವಿಕೆಟ್ ಗಳಿಸಿದರೆ, ಅರಾಫತ್ ಸನ್ನಿ 1 ವಿಕೆಟ್ ಮತ್ತು ಮುಸ್ತಫಿಜುರ್ ರೆಹ್ಮಾನ್ ಒಂದು ವಿಕೆಟ್ ಗಳಿಸಿದರು.

 ಬಳಿಕ ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶದ ಪರ ಸೌಮ್ಯ ಸರ್ಕಾರ್ ಅವರು 37 ರನ್ ಸ್ಕೋರ್ ಮಾಡಿದ್ದನ್ನು ಬಿಟ್ಟರೆ, ಉತ್ತಮ ಜೊತೆಯಾಟ ಮೂಡಿ ಬರದೇ 138 ರನ್‌ಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು.  ದಕ್ಷಿಣ ಆಫ್ರಿಕಾ ಪರ  ಕೈಲ್ ಅಬಾಟ್ 3 ವಿಕೆಟ್ ಕಬಳಿಸಿದರೆ, ವೇನ್ ಪಾರ್ನೆಲ್ 2 ವಿಕೆಟ್ ಗಳಿಸಿದರು. 

ವೆಬ್ದುನಿಯಾವನ್ನು ಓದಿ