ದಕ್ಷಿಣ ಆಫ್ರಿಕಾದ 209 ರನ್ ಬೃಹತ್ ಮೊತ್ತ: ಚಿನಕುರುಳಿ ಆಫ್ಘಾನಿಸ್ತಾನಕ್ಕೆ ಸೋಲು

ಸೋಮವಾರ, 21 ಮಾರ್ಚ್ 2016 (00:06 IST)
ಮುಂಬೈನ ವಾಂಖಡೆ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಫ್ಘಾನಿಸ್ತಾನದ ನಡುವೆ ಸೂಪರ್ 10 ಗ್ರೂಪ್ ಒಂದರ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಚಿನಕುರುಳಿ ಆಫ್ಘಾನಿಸ್ತಾನ ತಂಡವನ್ನು 37 ರನ್‌ಗಳಿಂದ ಸೋಲಿಸಿ ಪಾಯಿಂಟ್ ಪಟ್ಟಿಯಲ್ಲಿ ಖಾತೆಯನ್ನು ತೆರೆದಿದೆ. ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸೋಲನುಭವಿಸಿತ್ತು. ಮೊದಲಿಗೆ ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 5 ವಿಕೆಟ್ ಕಳೆದುಕೊಂಡು 209 ರನ್ ಮಾಡಿತ್ತು.

ಕ್ವಿಂಟನ್ ಡಿ ಕಾಕ್ 31 ಎಸೆತಗಳಲ್ಲಿ 45 ರನ್ ಮತ್ತು ಪ್ಲೆಸಿಸ್ 41 ರನ್ , ಡಿ ವಿಲಿಯರ್ಸ್ 64 ರನ್‌ಗಳಿಂದ ದಕ್ಷಿಣ ಆಫ್ರಿಕಾ ಬೃಹತ್ ಸ್ಕೋರನ್ನು ಕಲೆಹಾಕಲು ನೆರವಾಗಿದ್ದರು. ಇದಕ್ಕೆ ಉತ್ತರವಾಗಿ ಆಫ್ಘಾನಿಸ್ತಾನ ಆರಂಭದಲ್ಲಿ ವೇಗದಲ್ಲಿ ರನ್ ಗಳಿಸಲಾರಂಭಿಸಿ 10. 3 ಓವರುಗಳಲ್ಲಿ 105 ರನ್‌ಗಳಾಗಿದ್ದಾಗ ಗುಲ್ಬದಿನ್ ನಯೀಬ್ ವಿಕೆಟ್ ಕಳೆದುಕೊಂಡಿತು. ಆರಂಭಿಕ ಆಟಗಾರರರಾದ ಮೊಹಮ್ಮದ್ ಶಹಜಾದ್ 19 ಎಸೆತಗಳಲ್ಲಿ ಅಬ್ಬರದ 44 ರನ್ ಮತ್ತು ಜಡ್ರಾನ್ 24 ಎಸೆತಗಳಲ್ಲಿ 25 ರನ್ ಗಳಿಸಿದರು.

ಶೇನ್ವಾರಿ 14 ಎಸೆತಗಳಲ್ಲಿ 25 ರನ್ ಹೊಡೆದರು. ಆದರೆ  ಕ್ರಿಸ್ ಮಾರಿಸ್ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಆಪ್ಘಾನಿಸ್ತಾನ ಬೇಗನೇ ವಿಕೆಟ್ ಕಳೆದುಕೊಂಡು 172 ರನ್‌ಗಳಿಗೆ ಆಲೌಟ್ ಆಗಿದೆ. ದಕ್ಷಿಣ ಆಫ್ರಿಕಾ ಪರ ರಬಾಡಾ 2 ವಿಕೆಟ್, ಅಬಾಟ್ 2 ವಿಕೆಟ್, ಇಮ್ರಾನ್ ತಾಹಿರ್ 2 ವಿಕೆಟ್ ಮತ್ತು ಕ್ರಿಸ್ ಮಾರಿಸ್ 4 ವಿಕೆಟ್ ಕಬಳಿಸಿದರು. 

ವೆಬ್ದುನಿಯಾವನ್ನು ಓದಿ