ಜೈಲಿನಲ್ಲಿದ್ದಾಗ ಶ್ರೀಶಾಂತ್ ಮೇಲೆ ಚಾಕುವಿನಿಂದ ಹಲ್ಲೆ: ಕುಟುಂಬದ ಸದಸ್ಯರ ಆರೋಪ

ಶುಕ್ರವಾರ, 27 ಫೆಬ್ರವರಿ 2015 (14:52 IST)
ಐಪಿಎಲ್ ಬೆಟ್ಟಿಂಗ್ ಹಗರಣದಲ್ಲಿ ಸಿಲುಕಿ ವಿಚಾರಣೆ ಎದುರಿಸುತ್ತಿರುವ ರಾಜಸ್ಥಾನ ರಾಯಲ್ಸ್ ತಂಡದ ಮಾಜಿ ಕ್ರಿಕೆಟಿಗ ಶ್ರೀಶಾಂತ್ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಆದರೆ, ತಿಹಾರ್ ಜೈಲಿನಲ್ಲಿರುವಾಗ ಅವರ ಮೇಲೆ  ಜೈಲಿನಲ್ಲಿದ್ದ ಕೈದಿಯೊಬ್ಬ ಚಾಕುವಿನಿಂದ ಹಲ್ಲೆ ಮಾಡಿದ್ದ ಎಂದು ಕುಟುಂಬದ ಮೂಲಗಳು ಆರೋಪಿಸಿವೆ. 
 
ಶ್ರೀಶಾಂತ್ ಸಹೋದರಿಯ ಪತಿ ಮಧು ಬಾಲಕೃಷ್ಣನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. 
 
ಶ್ರೀಶಾಂತ್ 26 ದಿನಗಳ ಕಾಲ ಜೈಲಿನಲ್ಲಿ ಕಳೆದು ಮೇ 2013 ರಲ್ಲಿ ಹೊರಬಂದಿದ್ದರು. ಇದೀಗ ಅವರ ಭಾವ ಖ್ಯಾತ ಹಿನ್ನೆಲೆ ಗಾಯಕ ಬಾಲಕೃಷ್ಣನ್ ಜೈಲಿನಲ್ಲಿ ನಡೆದ ಘಟನೆಯನ್ನು ಬಹಿರಂಗಗೊಳಿಸಿದ್ದಾರೆ. 
 
ಶ್ರೀಶಾಂತ್ ಜೈಲಿನ ಆವರಣದಲ್ಲಿ ನಡೆದಾಟುತ್ತಿರುವಾಗ ರೌಡಿ ಇತಿಹಾಸ ಹೊಂದಿದ ವ್ಯಕ್ತಿಯೊಬ್ಬ ಹರಿತವಾದ ಚಾಕುವಿನಿಂದ ಹಲ್ಲೆ ಮಾಡಲು ಪ್ರಯತ್ನಿಸಿದ. ಅದನ್ನು ತಡೆಯಲು ಹೋಗಿದ್ದರಿಂದ ಅವರ ಕೈಗೆ ಗಾಯವಾಗಿತ್ತು. ನಂತರ ಜೈಲಿನ ಭದ್ರತಾ ಸಿಬ್ಬಂದಿ ಹಲ್ಲೆ ಮಾಡಿದ ಕೈದಿಯನ್ನು ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋದರು ಎಂದು ತಿಳಿಸಿದ್ದಾರೆ. 
 
ಆದರೆ, ಜೈಲಿನಲ್ಲಿ ನಡೆದ ಹಲ್ಲೆಯನ್ನು ಬಹಿರಂಗಗೊಳಿಸಿ ಮತ್ತೊಂದು ವಿವಾದವನ್ನು ಸೃಷ್ಟಿಸಬಾರದು ಎನ್ನುವ ಭಾವನೆಗಳಿಂದ ಶ್ರೀಶಾಂತ್ ಕುಟುಂಬದ ಸದಸ್ಯರು ಮೌನವಾಗಿದ್ದರು ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
 
ಕಳೆದ 2013ರಲ್ಲಿ ನಡೆದ ಐಪಿಎಲ್‌ ಪಂದ್ಯಾವಳಿ ಸಂದರ್ಭದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ ಆಡುತ್ತಿದ್ದ ಶ್ರೀಶಾಂತ್ ಅವರನ್ನು ಮ್ಯಾಚ್‌ಫಿಕ್ಸಿಂಗ್ ಆರೋಪದ ಮೇಲೆ ಬಂಧಿಸಲಾಗಿತ್ತು. 
 
ದೆಹಲಿ ಪೊಲೀಸರು ಶ್ರೀಶಾಂತ್ ವಿರುದ್ಧ ಮೋಕಾ ಪ್ರಕರಣವನ್ನು ದಾಖಲಿಸಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಅಂತ್ಯಗೊಂಡಿದೆ. ಬಹುತೇಕ ಮುಂದಿನ ತಿಂಗಳು ತೀರ್ಪು ಹೊರಬೀಳುವ ಸಾಧ್ಯತೆಗಳಿವೆ. 
 
ನ್ಯಾಯಾಲಯದ ಕೀರ್ಪು ತಮ್ಮ ಪರವಾಗಿ ಬರುವ ಆತ್ಮವಿಶ್ವಾಸವಿದೆ ಎಂದು ಶ್ರೀಶಾಂತ್ ಈಗಾಗಲೇ ಹೇಳಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ