ಶ್ರೀಲಂಕಾ ಮಹಿಳಾ ಕ್ರಿಕೆಟಿಗರಿಗೆ ಲೈಂಗಿಕ ಕಿರುಕುಳ: ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ

ಶುಕ್ರವಾರ, 22 ಮೇ 2015 (12:39 IST)
ಶ್ರೀಲಂಕಾದ ಮಹಿಳಾ ತಂಡದ ಆಟಗಾರರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆಗೆ ಸಂಬಂಧಿಸಿದ ತನಿಖೆಯಲ್ಲಿ ತಪ್ಪೆಸಗಿದ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮಗಳನ್ನು ಕೈಗೊಳ್ಳಲು ಕ್ರೀಡಾ ಸಚಿವ ನವೀನ್ ದಿಸ್ಸಾನಾಯಕೆ ನಿರ್ಧರಿಸಿದ್ದಾರೆ. 
 
ಶ್ರೀಲಂಕಾ ಕ್ರಿಕೆಟ್ ಆಟಗಾರ್ತಿಯರ ಮೇಲೆ ಮಹಿಳಾ ಮ್ಯಾನೇಜ್‌ಮೆಂಟ್ ತಂಡದ ಸದಸ್ಯರು ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಸಾಕ್ಷ್ಯಾಧಾರಗಳು ಸಿಕ್ಕಿವೆಯೆಂದು ಸಮಿತಿಯ ವರದಿಯಲ್ಲಿ ತಿಳಿಸಲಾಗಿದೆ.   ಈ ಹಿನ್ನೆಲೆಯಲ್ಲಿ ಸಾಕ್ಷ್ಯಾಧಾರಗಳು ಸಿಕ್ಕಿರುವ  ಸದಸ್ಯರ ವಿರುದ್ಧ ಶಿಸ್ತುಕ್ರಮಕ್ಕೆ ಸಚಿವರು ನಿರ್ಧರಿಸಿದ್ದಾರೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಕ್ರೀಡಾ ಸಚಿವಾಲಯವು ಈ ಸಮಿತಿಯ ಶಿಫಾರಸುಗಳನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಮಧ್ಯಂತರ ಸಮಿತಿಗೆ ರವಾನೆ ಮಾಡಿ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರುವಂತೆ ಕಠಿಣ ಸೂಚನೆಗಳನ್ನು ನೀಡಲಿದೆ ಎಂದು ಮೂಲಗಳು ಹೇಳಿವೆ.
 
 ಕಳೆದ ವರ್ಷ ನವೆಂಬರ್‌ನಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಮಹಿಳಾ ಆಟಗಾರರಿಗೆ ಲೈಂಗಿಕ ಕಿರುಕುಳ ಕುರಿತು ಪ್ರಾಥಮಿಕ ತನಿಖೆಗೆ ತನಿಖಾ ಸಮಿತಿಯನ್ನು ನೇಮಕ ಮಾಡಿತ್ತು. ರಾಷ್ಟ್ರೀಯ ತಂಡದಲ್ಲಿ ಉಳಿಯಲು ಕೆಲವು ಮಹಿಳಾ ಆಟಗಾರರು ಅಧಿಕಾರಗಳ ಲೈಂಗಿಕ ಬಯಕೆ ತಣಿಸಬೇಕಾಗಿತ್ತೆಂದು ಹೇಳಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ