ರವಿಚಂದ್ರನ್ ಅಶ್ವಿನ್ ಕೊಟ್ಟ ಏಟಿಗೆ ಊಟಕ್ಕೂ ಮೊದಲು ಲಂಕಾ ಪೆವಿಲಿಯನ್ ಗೆ
ಶನಿವಾರ, 5 ಆಗಸ್ಟ್ 2017 (12:13 IST)
ಕೊಲೊಂಬೊ: ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿ ಯಾವುದೇ ಸ್ಪರ್ಧೆಗಳಿಲ್ಲದೇ ಏಕ ಪಕ್ಷೀಯವಾಗಿ ಸಾಗುತ್ತಿದೆ. ದ್ವಿತೀಯ ಟೆಸ್ಟ್ ನ ಮೂರನೇ ದಿನ ಟೀಂ ಇಂಡಿಯಾ ಘಾತಕ ದಾಳಿಗೆ ತತ್ತರಿಸಿದ ಲಂಕಾ ಊಟದ ವಿರಾಮಕ್ಕೆ ಮೊದಲೇ 183 ರನ್ ಗಳಿಗೆ ಆಲೌಟ್ ಆಗಿದೆ.
ನಿನ್ನೆಯೇ 50 ರನ್ ಗಳಿಗೆ ಲಂಕಾದ 2 ವಿಕೆಟ್ ಕಿತ್ತಿದ್ದ ಭಾರತ ಇಂದು ಮತ್ತೆ ದುರ್ಬಲ ತಂಡದೆದುರು ತನ್ನ ಪ್ರಬಲಾಸ್ತ್ರ ಪ್ರಯೋಗಿಸಿತು. ಭಾರತದ ಮೊಹಮ್ಮದ್ ಶಮಿ ಮತ್ತು ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಕಿತ್ತು ಲಂಕಾ ಬ್ಯಾಟ್ಸ್ ಮನ್ ಗಳಿಗೆ ನಡುಕ ಹುಟ್ಟಿಸಿದರು. ರವಿಚಂದ್ರನ್ ಅಶ್ವಿನ್ ಮತ್ತೊಮ್ಮೆ 5 ವಿಕೆಟ್ ಗಳ ಗೊಂಚಲು ಪಡೆದರು.
ಇಂದು ಮೊಹಮ್ಮದ್ ಶಮಿ ಮತ್ತು ಜಡೇಜಾಗೆ ಯಶಸ್ಸು ಸಿಕ್ಕಿದ್ದರಿಂದ ನಾಯಕ ಕೊಹ್ಲಿ ಆದಷ್ಟು ಇವರಿಬ್ಬರನ್ನೇ ದಾಳಿಗಿಳಿಸಿ ಆದಷ್ಟು ಬೇಗ ಲಂಕಾ ಪ್ರಥಮ ಇನಿಂಗ್ಸ್ ಗೆ ಕೊನೆ ಹಾಡುವ ಪ್ರಯತ್ನ ನಡೆಸಿದರು. ಇದರೊಂದಿಗೆ ಭಾರತಕ್ಕೆ 439 ರನ್ ಗಳ ಪ್ರಥಮ ಇನಿಂಗ್ಸ್ ಮುನ್ನಡೆ ಸಿಕ್ಕಿದೆ.
622 ರನ್ ಗಳ ಬೃಹತ್ ಮೊತ್ತ ಬೆನ್ನತ್ತುವಾಗ ಬೇಕಿದ್ದ ಯಾವುದೇ ಹೋರಾಟ ಲಂಕಾ ತಂಡದಿಂದ ಕಾಣಲಿಲ್ಲ. ವಿಕೆಟ್ ಕೀಪರ್ ಡಿಕ್ ವೆಲ್ಲಾ 51 ರನ್ ಗಳಿಸಿದ್ದು ಬಿಟ್ಟರೆ ಬೇರೆ ಯಾರೂ ಹೇಳಿಕೊಳ್ಳುವಂತಹ ಆಟವಾಡಲಿಲ್ಲ. ಅಕ್ಷರಶಃ ಏಕದಿನ ಶೈಲಿಯಲ್ಲಿ 50 ಓವರ್ ಗೆ ಮೊದಲ ಇನಿಂಗ್ಸ್ ಗೆ ಲಂಕಾ ಮಂಗಳ ಹಾಡಿದೆ.