ಶ್ರೀಲಂಕಾ 3 ವಿಕೆಟ್ ಪತನ: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

ಸೋಮವಾರ, 31 ಆಗಸ್ಟ್ 2015 (17:15 IST)
ಶ್ರೀಲಂಕಾ ಮತ್ತು ಭಾರತದ ನಡುವೆ ನಡೆಯುತ್ತಿರುವ ಮೂರನೇ ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ಭಾರತ ಮೇಲುಗೈ ಸಾಧಿಸಿದ್ದು, ಶ್ರೀಲಂಕಾದ ಎರಡನೇ ಇನ್ನಿಂಗ್ಸ್‌ನಲ್ಲಿ 26 ರನ್ ನೀಡಿ 3 ವಿಕೆಟ್ ಕಬಳಿಸಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ 274 ರನ್ ಗಳಿಸಿರುವ ಭಾರತ ಶ್ರೀಲಂಕಾ ಗೆಲುವಿಗೆ 386 ರನ್ ಬೃಹತ್ ಮೊತ್ತದ ಸವಾಲನ್ನು ಹಾಕಿದೆ. ಈಗಾಗಲೇ 3 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿರುವ ಶ್ರೀಲಂಕಾ ಸೋಲಿನ ಭೀತಿ ಎದುರಿಸಿದೆ.

ಭಾರತ ಈ ಟೆಸ್ಟ್ ಪಂದ್ಯದಲ್ಲಿ ಜಯಗಳಿಸಿದರೆ ಹಲವಾರು ವರ್ಷಗಳ ನಂತರ ಶ್ರೀಲಂಕಾ ನೆಲದಲ್ಲಿ ಸರಣಿ ಜಯ ಸಾಧಿಸಿದ ಕೀರ್ತಿಗೆ ಪಾತ್ರವಾಗುತ್ತದೆ ಮತ್ತು ಕೊಹ್ಲಿ ನಾಯಕರಾಗಿ ಮೊದಲ ಸರಣಿ ಗೆಲುವಿನ ಗೌರವಕ್ಕೂ ಪಾತ್ರರಾಗುತ್ತಾರೆ.  ಎರಡನೇ ಇನ್ನಿಂಗ್ಸ್‌ನಲ್ಲಿ ಇಶಾಂತ್ ಶರ್ಮಾ ವೇಗದಬೌಲಿಂಗ್  ದಾಳಿಗೆ ತತ್ತರಿಸಿದ ಶ್ರೀಲಂಕಾ ತಂಡ 10 ಓವರುಗಳಲ್ಲೇ 3 ವಿಕೆಟ್ ಕಳೆದುಕೊಂಡು ತತ್ತರಿಸಿದೆ. ಇಶಾಂತ್ ಶರ್ಮಾ ಅವರ ಬೌಲಿಂಗ್‌ನಲ್ಲಿ ಉಪುಲ್ ತರಂಗಾ ಓಜಾಗೆ ಕ್ಯಾಚಿತ್ತು ಔಟಾದರು ಮತ್ತು ಚಾಂಡಿಮಾನ್ ಇಶಾಂತ್ ಎಸೆತದಲ್ಲಿ ಕೊಹ್ಲಿಗೆ ಕ್ಯಾಚಿತ್ತು ಔಟಾದರು.

ಕರುಣಾ ರತ್ನೆ ಉಮೇಶ್ ಎಸೆತದಲ್ಲಿ ವಿಕೆಟ್ ಕೀಪರ್ ಓಜಾ ಕ್ಯಾಚ್ ಹಿಡಿದು ಔಟಾದರು.  ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ಒಂದು ಹಂತದಲ್ಲಿ 179ಕ್ಕೆ 7 ವಿಕೆಟ್ ಕಳೆದುಕೊಂಡು ಕಡಿಮೆ ಸ್ಕೋರಿಗೆ ಔಟಾಗುವ ಭೀತಿ ಎದುರಿಸಿತ್ತು. ಆದರೆ ಅಮಿತ್ ಮಿಶ್ರಾ 39 ಮತ್ತು ಅಶ್ವಿನ್ 58 ರನ್ ನೆರವಿನಿಂದ ಉತ್ತಮ ಸ್ಕೋರನ್ನು ಕಲೆಹಾಕಿದೆ.

ವೆಬ್ದುನಿಯಾವನ್ನು ಓದಿ