ಪಾಕಿಸ್ತಾನ ಮಣಿಸಿ ಏಷ್ಯಾ ಕಪ್ ಗೆದ್ದ ಶ್ರೀಲಂಕಾ

ಸೋಮವಾರ, 12 ಸೆಪ್ಟಂಬರ್ 2022 (08:00 IST)
ದುಬೈ: ಈ ಬಾರಿಯ ಏಷ್ಯಾ ಕಪ್ ಕಿರೀಟ ಅತಿಥೇಯ ಶ್ರೀಲಂಕಾ ಪಾಲಾಗಿದೆ. ಪಾಕಿಸ್ತಾನ ತಂಡವನ್ನು ಫೈನಲ್ ನಲ್ಲಿ 23 ರನ್ ಗಳಿಂದ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ದೇಶದಲ್ಲಿ ಆರ್ಥಿಕ ವ್ಯವಸ್ಥೆ, ರಾಜಕೀಯ ಅರಾಜಕತೆ ಸೃಷ್ಟಿಯಾಗಿರುವಾಗ ಶ್ರೀಲಂಕಾಗೆ ಈ ಗೆಲುವು ಮಾನಸಿಕವಾಗಿ ಹೊಸ ಉತ್ಸಾಹ ಕೊಟ್ಟಿದೆ. ನಿನ್ನೆಯ ಪಂದ್ಯದಲ್ಲಿ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಶ್ರೀಲಂಕಾ 170 ರನ್ ಗಳಿಸಿತು. ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿರುವ ರಾಜಪಕ್ಸೆ ನಿನ್ನೆಯ ಪಂದ್ಯದಲ್ಲಿ 45 ಎಸೆತಗಳಲ್ಲಿ 71 ರನ್ ಗಳಿಸಿದರೆ ಅವರಿಗೆ ತಕ್ಕ ಸಾಥ್ ನೀಡಿದ ವನೀಂದು ಹಸರಂಗ 21 ಎಸೆತಗಳಲ್ಲಿ 36 ರನ್ ಗಳಿಸಿದರು.

ಈ ಮೊತ್ತ ಬೆನ್ನಟ್ಟಿದ ಪಾಕ್ ಗೆ ಮತ್ತೆ ಬಾಬರ್ ಅಜಮ್ ಕೈ ಕೊಟ್ಟರು. ಅವರು ಕೇವಲ 5 ರನ್ ಗೆ ಔಟಾದರು. ಮೊಹಮ್ಮದ್ ರಿಜ್ವಾನ್ 55, ಇಫ್ತಿಕಾರ್ ಅಹಮ್ಮದ್ 32 ರನ್ ಗಳಿಸಿದ್ದು ಬಿಟ್ಟರೆ ಉಳಿದವರಿಂದ ತಕ್ಕ ಪ್ರದರ್ಶನ ಬರಲಿಲ್ಲ. ಇದರಿಂದಾಗಿ ಪಾಕ್ 20 ಓವರ್ ಗಳಲ್ಲಿ 147 ರನ್ ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಲಂಕಾ 6 ನೇ ಬಾರಿಗೆ ಏಷ್ಯಾ ಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ