ಬಿಸಿಸಿಐನಿಂದ 1.90 ಕೋಟಿ ರೂ. ಸಂಭಾವನೆ ಕೇಳಿದ ಗವಾಸ್ಕರ್

ಸೋಮವಾರ, 27 ಏಪ್ರಿಲ್ 2015 (16:50 IST)
ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ತಾವು ಕಳೆದ ವರ್ಷ ಐಪಿಎಲ್ ಏಳನೇ ಆವೃತ್ತಿಯಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆಗಾಗಿ 1.90 ಕೋಟಿ ರೂ. ಸಂಭಾವನೆಯ ಮೊತ್ತವನ್ನು ನೀಡಬೇಕೆಂದು ಆಗ್ರಹಿಸಿದ್ದಾರೆ. ಗವಾಸ್ಕರ್ ಅವರನ್ನು ಸುಪ್ರೀಂಕೋರ್ಟ್ ನಿರ್ದೇಶನದಂತೆ ಬಿಸಿಸಿಐ-ಐಪಿಎಲ್ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.  ಗವಾಸ್ಕರ್ ತಮ್ಮ ವಿವಿಧ ಮಾಧ್ಯಮದ ಬದ್ಧತೆಗಳನ್ನು (ಕಾಮೆಂಟರ್ ಮತ್ತು ಅಂಕಣ ಲೇಖನಗಳು) ಬದಿಗಿಟ್ಟು ಈ ಹುದ್ದೆಯನ್ನು ನಿರ್ವಹಿಸಿರುವುದರಿಂದ ಸೂಕ್ತ ಸಂಭಾವನೆ ನೀಡುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು. 
 
 ಕಾರ್ಯಕಾರಿ ಸಮಿತಿಯ ವಿಶ್ವಾಸಾರ್ಹ ಮೂಲಗಳ ಪ್ರಕಾರ, ಗವಾಸ್ಕರ್ ಸಂಭಾವನೆಯ ಬಗ್ಗೆ ಮಂಡಳಿಗೆ ಬರೆದಿದ್ದರು. ತಾವು  ಟಿವಿ ಕಾಮೆಂಟರಿ, ಅಂಕಣ ಲೇಖನ ಮತ್ತು ಮಾಧ್ಯಮ ಪಂಡಿತ್ ಮುಂತಾದ ಹುದ್ದೆಗಳನ್ನು ನಿರ್ವಹಿಸಲು ಸಾಧ್ಯವಾಗದಿದ್ದರಿಂದ ಆ ಅವಧಿಯಲ್ಲಿ ಬರಬೇಕಿದ್ದ ಮೊತ್ತವಾದ 1.90 ಕೋಟಿ ರೂ. ಸಂಭಾವನೆ ನೀಡಬೇಕೆಂದು ಪತ್ರದಲ್ಲಿ ಕೋರಿದ್ದಾರೆಂದು ಕಾರ್ಯಕಾರಿ ಸಮಿತಿ ಸಭೆಯಲ್ಲಿದ್ದ ಹಿರಿಯ ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 
 
ಗವಾಸ್ಕರ್ ಕೇಳಿರುವ  ಮೊತ್ತವು ಅನುಮೋದನೆಯಾಗಿದೆಯೇ ಎಂಬ ಪ್ರಶ್ನೆಗೆ, ಇನ್ನೂ ಆಗಿಲ್ಲ. ಆದರೆ ಸುಪ್ರೀಂಕೋರ್ಟ್ ನಿರ್ದೇಶನವಿರುವುದರಿಂದ ಅವರಿಗೆ ಪರಿಹಾರ ನೀಡಬೇಕು. ಆದರೆ ಈ ಪತ್ರವನ್ನು ಹಣಕಾಸು ಸಮಿತಿಯ ಮುಂದಿರಿಸಿ ಅದು ಮೊತ್ತವನ್ನು ಅನುಮೋದಿಸುತ್ತದೆ ಎಂದು ನುಡಿದರು. 
 

ವೆಬ್ದುನಿಯಾವನ್ನು ಓದಿ