ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ 7 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದ ಬಳಿಕ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಸಾಂಪ್ರದಾಯಿಕ ಎದುರಾಳಿ ರಾಷ್ಟ್ರ ಮುಟ್ಟಿ ನೋಡಿಕೊಳ್ಳುವಂತಹ ಹೇಳಿಕೆ ನೀಡಿದ್ದಾರೆ.
ಈ ಪಂದ್ಯಕ್ಕೆ ಭಾರತೀಯರು ಬಹುತೇಕ ಬಹಿಷ್ಕಾರ ಹಾಕಿದ್ದರು. ಪಹಲ್ಗಾಮ್ ನಲ್ಲಿ ಪಾಕ್ ಪ್ರೇರಿತ ಉಗ್ರರು ದಾಳಿ ನಡೆಸಿ ಭಾರತೀಯ ಮಹಿಳೆಯರ ಸಿಂಧೂರ ಅಳಿಸಿದ್ದರು. ಈ ರೋಷಾಗ್ನಿ ಭಾರತೀಯರಲ್ಲಿತ್ತು. ಈ ಕಾರಣಕ್ಕೆ ಪಾಕಿಸ್ತಾನ ಜೊತೆ ಕ್ರಿಕೆಟ್ ಆಡಬಾರದು ಎಂದು ಪಹಲ್ಗಾಮ್ ನಲ್ಲಿ ಪ್ರಾಣ ಕಳೆದುಕೊಂಡಿದ್ದವರ ಕುಟುಂಬದವರೂ ಆಗ್ರಹಿಸಿದ್ದರು.
ಹಾಗಿದ್ದರೂ ಅನಿವಾರ್ಯವಾಗಿ ಭಾರತ ಈ ಪಂದ್ಯವನ್ನು ಆಡಬೇಕಾಗಿ ಬಂತು. ಆದರೆ ಈ ಪಂದ್ಯಕ್ಕೆ ಬಹುತೇಕರು ಬಹಿಷ್ಕಾರ ಹಾಕಿದ್ದರು. ಹೀಗಾಗಿ ಪಂದ್ಯದ ಬಳಿಕ ಸೂರ್ಯಕುಮಾರ್ ಯಾದವ್ ಈ ಗೆಲುವನ್ನು ದೇಶಕ್ಕೇ ಸಮರ್ಪಿಸಿದ್ದಾರೆ.
ನಾನೊಂದು ವಿಚಾರ ಹೇಳಬೇಕು. ಈ ಗೆಲುವು ನಮಗೆ ವಿಶೇಷವಾಗಿದೆ. ಪಹಲ್ಗಾಮ್ ದಾಳಿಯಲ್ಲಿ ಸಂತ್ರಸ್ತರಾದವರ ಕುಟುಂಬದವರ ಜೊತೆ ನಾವು ನಿಲ್ಲುತ್ತೇವೆ. ನಾವು ಅವರ ಜೊತೆಗಿದ್ದೇವೆ. ನಾವು ಈ ಗೆಲುವನ್ನು ನಮ್ಮ ಸಶಸ್ತ್ರ ಪಡೆಗೆ ಅರ್ಪಿಸುತ್ತೇವೆ. ಅವರು ನಮಗೆ ಸ್ಪೂರ್ತಿ, ಮುಂದೆಯೂ ಅವರ ಮುಖದಲ್ಲಿ ನಗು ಮೂಡಿಸುವಂತಹ ಕ್ಷಣಗಳನ್ನು ಮೈದಾನದಲ್ಲಿ ಇನ್ನಷ್ಟು ನೀಡುತ್ತೇವೆ ಎಂದು ಭರವಸೆ ನೀಡುತ್ತಿದ್ದೇನೆ ಎಂದಿದ್ದಾರೆ. ಆ ಮೂಲಕ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದ್ದಾರೆ.