T20 WC Final: ಸತತ ಎರಡನೇ ಬಾರಿ ಟೀಂ ಇಂಡಿಯಾ ವಿಶ್ವ ಚಾಂಪಿಯನ್

Krishnaveni K

ಭಾನುವಾರ, 8 ಮಾರ್ಚ್ 2026 (22:49 IST)
Photo Credit: X
ಅಹ್ಮದಾಬಾದ್: ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಟೀಂ ಇಂಡಿಯಾ ಸತತ 2 ನೇ ಬಾರಿಗೆ ವಿಶ್ವಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯವನ್ನು ಟೀಂ ಇಂಡಿಯಾ 96 ರನ್ ಗಳಿಂದ ಗೆದ್ದುಕೊಂಡಿದೆ.

ಇಂದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 255 ರನ್ ಗಳ ದಾಖಲೆಯ ಮೊತ್ತ ಪೇರಿಸಿತು. ಟಿ20 ವಿಶ್ವಕಪ್ ಫೈನಲ್ ನಲ್ಲಿ ಇದು ಗರಿಷ್ಠ ಸ್ಕೋರ್ ಆಗಿತ್ತು. ಸಂಜು ಸ್ಯಾಮ್ಸಮ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಅರ್ಧಶತಕ ಮತ್ತು ಶಿವಂ ದುಬೆ ಬಿರುಸಿನ 26 ರನ್ ಗಳಿಂದ ಟೀಂ ಇಂಡಿಯಾ ಬೃಹತ್ ಮೊತ್ತ ಕಲೆ ಹಾಕಿತು.

ಈ ಮೊತ್ತ ಬೆನ್ನತ್ತುವಾಗ ನ್ಯೂಜಿಲೆಂಡ್ ಮೊದಲ ಮೂರು ಓವರ್ ಗಳಲ್ಲಿ ಉತ್ತಮ ಆರಂಭ ಪಡೆಯಿತು. ಫಿನ್ ಅಲೆನ್ 9 ರನ್ ಗಳಿಸಿ ಔಟಾದ ಬಳಿಕ ನ್ಯೂಜಿಲೆಂಡ್ ಕುಸಿತ ಆರಂಭವಾಯಿತು. ಹಾಗಿದ್ದರೂ ಸೀಫರ್ಟ್ ಅಪಾಯಕಾರಿಯಾಗುವ ಸೂಚನೆ ನೀಡಿದರು. ಆದರೆ ಇನ್ನೊಂದೆಡೆ ನಿಯಮಿತವಾಗಿ ವಿಕೆಟ್ ಕಳೆದುಕೊಂಡಿದ್ದರಿಂದ ಅವರ ಆಟ ನಡೆಯಲಿಲ್ಲ. ಅಂತಿಮವಾಗಿ ಅವರು 52 ರನ್ ಗಳಿಸಿ ಔಟಾದರು. ಭಾರತದ ಪರ ಅದ್ಭುತವಾಗಿ ಬೌಲಿಂಗ್ ಮಾಡಿದ ಬುಮ್ರಾ 4 ವಿಕೆಟ್ ಕಬಳಿಸಿದರು. ಅಂತಿಮವಾಗಿ ನ್ಯೂಜಿಲೆಂಡ್ 19 ಓವರ್ ಗಳಲ್ಲಿ  159 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಪರ ಅಕ್ಸರ್ ಪಟೇಲ್ 3, ಹಾರ್ದಿಕ್ ಪಾಂಡ್ಯ 1, ವರುಣ್ ಚಕ್ರವರ್ತಿ 1 ವಿಕೆಟ್ ಕಬಳಿಸಿದರು. ಇದರೊಂದಿಗೆ ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ