ಟಿ20 ವಿಶ್ವಕಪ್: ಟೀಂ ಇಂಡಿಯಾ ಸೋಲಿಗೆ ಕಾರಣವಾದ ಕೊಹ್ಲಿ-ರೋಹಿತ್ ಫೀಲ್ಡಿಂಗ್

ಭಾನುವಾರ, 30 ಅಕ್ಟೋಬರ್ 2022 (20:37 IST)
ಪರ್ತ್: ಟಿ20 ವಿಶ್ವಕಪ್ ನಲ್ಲಿ ಇಂದು ದ.ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್ ಗಳ ಸೋಲು ಅನುಭವಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗಿಡಿ ಬೌಲಿಂಗ್ ದಾಳಿಗೆ ನಲುಗಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪ್ರಮುಖ 3 ದಿಗ್ಗಜ ವಿಕೆಟ್ ಗಳನ್ನು ಆರಂಭದಲ್ಲೇ ಕಬಳಿಸಿ ನಿಗಿಡಿ ಭಾರತದ ರನ್ ವೇಗಕ್ಕೆ ಸಂಪೂರ್ಣ ಕಡಿವಾಣ ಹಾಕಿದರು. ನಿಗಿಡಿ 4 ವಿಕೆಟ್ ಕಿತ್ತರು. ಕೆಎಲ್ ರಾಹುಲ್ 9, ರೋಹಿತ್ ಶರ್ಮಾ 15, ವಿರಾಟ್ ಕೊಹ್ಲಿ 12, ಹಾರ್ದಿಕ್ ಪಾಂಡ್ಯರನ್ನು 2 ರನ್ ಗಳಿಗೆ ನಿಗಿಡಿ ಪೆವಿಲಿಯನ್ ಗಟ್ಟಿದರು.

ಅಕ್ಸರ್ ಪಟೇಲ್ ಸ್ಥಾನಕ್ಕೆ ಬಂದ ದೀಪಕ್ ಹೂಡಾ ಶೂನ್ಯ ಸಂಪಾದಿಸಿದರು. ಎಲ್ಲರ ಮಧ್ಯೆ ಮಿಂಚಿದ್ದು ಸೂರ್ಯಕುಮಾರ್ ಯಾದವ್. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಧೃತಿಗೆಡದೇ ಆಡಿದ ಸೂರ್ಯ 40 ಎಸೆತಗಳಿಂದ 68 ರನ್ ಗಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ದ.ಆಫ್ರಿಕಾ ಆರಂಭ ಉತ್ತಮವಾಗಿರಲಿಲ್ಲ. ಕ್ವಿಂಟನ್ ಡಿ ಕಾಕ್ 1, ರಿಲೀ ರೋಸೋ ಶೂನ್ಯಕ್ಕೆ ನಿರ್ಗಮಿಸಿದರು. ಈ ಎರಡೂ ವಿಕೆಟ್ ಅರ್ಷ್ ದೀಪ್ ಸಿಂಗ್ ಪಾಲಾಯಿತು. ಮೊಹಮ್ಮದ್ ಶಮಿ ಅತ್ಯುತ್ತಮ ದಾಳಿ ಸಂಘಟಿಸಿ 1 ವಿಕೆಟ್ ಕಬಳಿಸಿದರು. ಆದರೆ ಬೌಲರ್ ಗಳ ಶ್ರಮಕ್ಕೆ ತಕ್ಕ ಫೀಲ್ಡಿಂಗ್ ಬರಲಿಲ್ಲ.

ರವಿಚಂದ್ರನ್ ಅಶ್ವಿನ್ ಎಸೆತದಲ್ಲಿ ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್ ನಡೆಸುತ್ತಿದ್ದ ಆಡನ್ ಮರ್ಕರನ್ ನೀಡಿದ ಸುಲಭ ಕ್ಯಾಚ್ ಕೈ ಚೆಲ್ಲಿದರು. ಮರು ಓವರ್ ನಲ್ಲಿ ಮೊಹಮ್ಮದ್ ಶಮಿ ಬೌಲಿಂಗ್ ಮಾಡುತ್ತಿದ್ದಾಗ ರೋಹಿತ್ ಶರ್ಮಾ ಮತ್ತೊಂದು ಸುಲಭ ರನೌಟ್ ಮಿಸ್ ಮಾಡಿಕೊಂಡರು. ಬಹುಶಃ ಈ ಎರಡೂ ವಿಕೆಟ್ ಪಡೆಯಲು ಭಾರತ ಯಶಸ್ವಿಯಾಗಿದ್ದರೆ ಪಂದ್ಯ ತಿರುವು ಪಡೆಯುತ್ತಿತ್ತು. ಆದರೆ ಮರ್ಕರನ್ 52 ಮತ್ತು ಡೇವಿಡ್ ಮಿಲ್ಲರ್ ಅಜೇಯ 59 ರನ್ ಗಳಿಸಿ ಭಾರತದಿಂದ ಜಯ ಕಸಿದುಕೊಂಡರು. ಕೊನೆಯಲ್ಲಿ ಆಫ್ರಿಕಾ 19.4 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿ ಗೆಲುವು ಪಡೆಯಿತು.

-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ