ಟೀಂ ಇಂಡಿಯಾ ಡ್ರಿಂಕ್ಸ್ ಬ್ರೇಕ್ ತೆಗೆದುಕೊಂಡರೆ ಆಸ್ಟ್ರೇಲಿಯನ್ನರಿಗೇಕೆ ಉರಿ?

ಸೋಮವಾರ, 6 ಮಾರ್ಚ್ 2017 (11:30 IST)
ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ  ಅನಗತ್ಯವಾಗಿ ಡ್ರಿಂಕ್ಸ್ ಬ್ರೇಕ್ ತೆಗೆದುಕೊಂಡು ಭಾರತೀಯ ಬ್ಯಾಟ್ಸ್ ಮನ್ ಗಳು ಆಸೀಸ್ ಆಟಗಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.


ಆಸ್ಟ್ರೇಲಿಯಾ ಆಲೌಟ್ ಆದ ತಕ್ಷಣ ದ್ವಿತೀಯ ಇನಿಂಗ್ಸ್ ಆಡಲಿಳಿದ ಭಾರತೀಯ ಬ್ಯಾಟ್ಸ್ ಮನ್ ಗಳು, ಐದು ಓವರ್ ಮುಕ್ತಾಯಗೊಂಡ ನಂತರ ಪಾನೀಯ ತರುವಂತೆ ಸೂಚಿಸಿದರು. ಇದು ಆಸ್ಟ್ರೇಲಿಯಾ ಬೌಲರ್ ನ್ಯಾಥಮ್ ಲಿಯೋನ್ ಸೇರಿದಂತೆ ಸಹ ಆಟಗಾರರ ಅಸಮಾಧಾನಕ್ಕೆ ಕಾರಣವಾಯಿತು.

ಬ್ಯಾಟಿಂಗ್ ಗೆ ಇಳಿಯುವ ಮೊದಲು ಆರಂಭಿಕರು ಪಾನೀಯ ಸೇವಿಸಿರುತ್ತಾರೆ. ಹಾಗಿದ್ದ ಮೇಲೆ ಕೇವಲ ಐದು ಓವರ್ ಮುಗಿದ ಮೇಲೆ ಅನಗತ್ಯವಾಗಿ ಆರಂಭಿಕರಾದ ಕೆಎಲ್ ರಾಹುಲ್ ಮತ್ತು ಅಭಿನವ್ ಮುಕುಂದ್ ಪಾನೀಯಕ್ಕೆ ವಿರಾಮ ತೆಗೆದುಕೊಂಡಿದ್ದೇಕೆ ಎಂದು ಅಂಪಾಯರ್ ಬಳಿ ಪ್ರಶ್ನಿಸಿದರು.

ಇದಾದ ಮೇಲೆ ಆಸ್ಟ್ರೇಲಿಯನ್ನರ ಸ್ಲೆಡ್ಜಿಂಗ್ ಯುದ್ಧವೂ ಪ್ರಾರಂಭವಾಯಿತು. ತಮ್ಮ ಎಸೆತದಲ್ಲಿ ಸಿಕ್ಸರ್ ಎತ್ತಿದ್ದ ಮುಕುಂದ್ ಮೇಲೆ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ಸ್ ಮಾತಿನ ಚಕಮಕಿ ನಡೆಸಿದರು. ಅದಕ್ಕೆ ಮುಕುಂದ್ ಕೂಡಾ ಬಾಯ್ಮಾತಿನಲ್ಲಿ ತಕ್ಕ ಉತ್ತರ ಕೊಟ್ಟರು.

ಅಂತೂ ಸರಣಿಯಲ್ಲಿ ಇದೇ ಮೊದಲ ಬಾರಿಗೆ ಉತ್ತಮ ಆರಂಭ ಪಡೆದ ಟೀಂ ಇಂಡಿಯಾ ದ್ವಿತೀಯ ಸರದಿಯಲ್ಲಿ ಭೋಜನ ವಿರಾಮದ ವೇಳೆಗೆ ವಿಕೆಟ್ ನಷ್ಟವಿಲ್ಲದೆ 38 ರನ್ ಗಳಿಸಿದೆ. ಕೆಎಲ್ ರಾಹುಲ್ 20 ರನ್ ಮತ್ತು ಅಭಿನವ್ ಮುಕುಂದ್ 16 ರನ್ ಗಳಿಸಿ ಬ್ಯಾಟಿಂಗ್ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ