ಮುಂಬೈ: ಭಾರತ ಮತ್ತು ಬಾಂಗ್ಲಾದೇಶ ನಡುವೆ ಮುಂದಿನ ತಿಂಗಳು ನಡೆಯಲಿರುವ ಟಿ20 ಸರಣಿಗೆ ಟೀಂ ಇಂಡಿಯಾ ಆಯ್ಕೆ ಮಾಡಲಾಗಿದ್ದು ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ.
ಸತತ ಕ್ರಿಕೆಟ್ ನಿಂದ ಬಳಲಿರುವ ಕೊಹ್ಲಿಗೆ ಕೆಲವು ದಿನಗಳ ವಿಶ್ರಾಂತಿ ನೀಡುವ ಬಗ್ಗೆ ಕೆಲವು ದಿನಗಳ ಮೊದಲೇ ಬಿಸಿಸಿಐ ಸುಳಿವು ನೀಡಿತ್ತು. ಅದರಂತೆ ಕೊಹ್ಲಿಯನ್ನು ಹೊರಗಿಡಲಾಗಿದ್ದು, ರೋಹಿತ್ ಶರ್ಮಾಗೆ ನಾಯಕತ್ವ ನೀಡಲಾಗಿದೆ. ಯುವ ಆಟಗಾರ ಶಿವಂ ದುಬೆಗೆ ಚೊಚ್ಚಲ ಅವಕಾಶ ನೀಡಲಾಗಿದೆ. ವಿಕೆಟ್ ಕೀಪರ್ ಸ್ಥಾನದಲ್ಲಿ ರಿಷಬ್ ಪಂತ್ ಜತೆಗೆ ಸಂಜು ಸ್ಯಾಮ್ಸನ್ ಗೂ ಸ್ಥಾನ ನೀಡಲಾಗಿದೆ. ಗಾಯಗೊಂಡು ವಿಶ್ರಾಂತಿಯಲ್ಲಿರುವ ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾರನ್ನು ಆಯ್ಕೆ ಪರಿಗಣಿಸಲಾಗಿರಲಿಲ್ಲ.
ಇನ್ನು ಟೆಸ್ಟ್ ಸರಣಿಗೂ ತಂಡದ ಆಯ್ಕೆ ಮಾಡಲಾಗಿದ್ದು, ವಿರಾಟ್ ಕೊಹ್ಲಿಯೇ ನಾಯಕರಾಗಿದ್ದಾರೆ. ಟೆಸ್ಟ್ ತಂಡದಲ್ಲಿ ವಿಶೇಷ ಬದಲಾವಣೆಯೇನೂ ಆಗಿಲ್ಲ. ಹಾಗಿದ್ದರೂ ದ.ಆಫ್ರಿಕಾ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಶಹಬಾಜ್ ನದೀಂರನ್ನು ಕಡೆಗಣಿಸಿ ಶಬ್ನಂ ಗಿಲ್ ಗೆ ಅವಕಾಶ ನೀಡಲಾಗಿದೆ.