ಡಿಆರ್ ಎಸ್ ವಿಚಾರದಲ್ಲಿ ವಿರಾಟ್ ಕೊಹ್ಲಿ ಬಿಗ್ ಜೀರೋ!

ಮಂಗಳವಾರ, 28 ಫೆಬ್ರವರಿ 2017 (10:59 IST)
ಮುಂಬೈ: ಅಂಪಾಯರ್ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಡಿಆರ್ ಎಸ್ ವ್ಯವಸ್ಥೆಯನ್ನು ಭಾರತ ಅಳವಡಿಸಿಕೊಂಡಿದ್ದೇ ಮನಸ್ಸಿಲ್ಲದ ಮನಸ್ಸಿನಿಂದ. ಅದೂ ಇತ್ತೀಚೆಗೆ. ಆದರೆ ವಿಶ್ವ ಕ್ರಿಕೆಟ್ ನಲ್ಲಿ ದೊಡ್ಡಣ್ಣನಂತೆ ಮೆರೆಯುತ್ತಿರುವ ಭಾರತ ತಂಡ ಡಿಆರ್ ಎಸ್ ವಿಚಾರದಲ್ಲಿ ತಾನೆಂಥಾ ಎಳಸು ಎನ್ನುವುದನ್ನು ಸಾಬೀತುಪಡಿಸಿದೆ.


ಧೋನಿ ಡಿಆರ್ ಎಸ್ ವಿರೋಧಿಸುತ್ತಿದ್ದರೂ, ಅಂಪಾಯರ್ ತೀರ್ಪು ತಪ್ಪೋ, ಸರಿಯೋ ಎಂದು ಸರಿಯಾಗಿ ಊಹೆ ಮಾಡುವುದರಲ್ಲಿ ಅವರನ್ನು ಮೀರಿಸುವವರಿಲ್ಲ. ಅಂತಹಾ ಖರಾರುವಾಕ್ ನಿರ್ಧಾರ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಬರುತ್ತಿಲ್ಲ. ವಿಕೆಟ್ ಹಿಂದುಗಡೆ ನಿಲ್ಲುವ ವೃದ್ಧಿಮಾನ್ ಸಹಾಗೆ ಕೂಡಾ ಸರಿಯಾಗಿ ಊಹೆ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಭಾರತ ಡಿಆರ್ ಎಸ್ ಅಳವಡಿಸಿಕೊಂಡಾಗಿನಿಂದ ಟೆಸ್ಟ್ ಪಂದ್ಯಗಳಲ್ಲಿ ಇದುವರೆಗೆ 42 ಬಾರಿ ಮನವಿ ಸಲ್ಲಿಸಿ ಕೇವಲ 10 ಬಾರಿ ಮಾತ್ರ ಯಶಸ್ಸು ಸಾಧಿಸಿದ್ದಾರೆ.

ಸಾಮಾನ್ಯವಾಗಿ ಲೆಗ್ ಬಿಫೋರ್ ವಿಚಾರದಲ್ಲಿ ಅಂಪಾಯರ್ ಗಳ ನಿರ್ಧಾರ ಸರಿಯಾಗಿಯೇ ಇರುತ್ತದೆ. ವೃದ್ಧಿಮಾನ್ ಸಹಾ ಉತ್ತಮ ವಿಕೆಟ್ ಕೀಪರ್ ಏನೋ ನಿಜ. ಆದರೆ ಕೊಹ್ಲಿ ಮಾಡುವ ನಿರ್ಧಾರಗಳನ್ನು ಕೆಲವೊಂದು ಸಾರಿ ತಪ್ಪು ಎಂದು ಹೇಳುವ ಧೈರ್ಯ ಅವರಿಗಿಲ್ಲ.

ಸರಿಯಾದ ಲೆಕ್ಕಾಚಾರ, ಮುಂದಾಲೋಚನೆ ಇಲ್ಲದೇ ಡಿಆರ್ ಎಸ್ ಬಳಸಿ ಬೇಕಾದಾಗ ಕೈಚೆಲ್ಲಿ ಕೂತು ಟೀಂ ಇಂಡಿಯಾ ತಪ್ಪು ಮಾಡುತ್ತಿದೆ. ಈಗೀಗ ಆಟಗಾರರು ಪ್ರದರ್ಶನ, ಅಂಪಾಯರ್ ಗಳ ತೀರ್ಪಿನ ಜತೆಗೆ ನಾಯಕ ಹೇಗೆ ಡಿಆರ್ ಎಸ್ ವಿಧಾನದ ಸದ್ಭಳಕೆ ಮಾಡುತ್ತಾನೆ ಎನ್ನುವುದು ಕೂಡಾ ಫಲಿತಾಂಶ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಟೀಂ ಇಂಡಿಯಾ ಮರೆಯಬಾರದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ