ಟೀಂ ಇಂಡಿಯಾದ ಮಾರಕ ಬೌಲಿಂಗ್ ದಾಳಿಗೆ ಯುಎಇ 102ಕ್ಕೆ ಆಲೌಟ್

ಶನಿವಾರ, 28 ಫೆಬ್ರವರಿ 2015 (15:13 IST)
ಭಾರತ ಮತ್ತು ಯುಎಇ ನಡುವೆ ಪರ್ತ್‌ನ ಡಬ್ಲ್ಯುಎಸಿಎ ಮೈದಾನದಲ್ಲಿ ನಡೆಯುತ್ತಿರುವ ಪೂಲ್ ಬಿಯ 21ನೇ ವಿಶ್ವಕಪ್ ಪಂದ್ಯದಲ್ಲಿ ಯುಎಇ ಭಾರತದ ಬೌಲರುಗಳ ಮಾರಕ ಬೌಲಿಂಗ್ ದಾಳಿಯಿಂದ ಕೇವಲ 102 ರನ್‌ಗಳಿಗೆ ಆಲೌಟ್ ಆಗಿದೆ. ಯುಎಇ ಪರ ಶೈಮನ್ ಅನ್ವರ್ ಅವರ 49 ಎಸೆತಗಳಲ್ಲಿ 35 ರನ್ ಬಿಟ್ಟರೆ ಉಳಿದವರು ಯಾರೂ ಉತ್ತಮವಾಗಿ ಆಡಿಲ್ಲ.

ರವಿಚಂದ್ರನ್ ಅಶ್ವಿನ್ ಅವರ ಸ್ಪಿನ್ ದಾಳಿ ಎದುರಿಸುವಲ್ಲಿ ತಿಣುಕಾಡಿದ ಯುಎಇ ಆಟಗಾರರು ಕೇವಲ 10 ರನ್‌ಗಳ ಅಂತರದಲ್ಲಿ ಒಂದೊಂದೇ ವಿಕೆಟ್ ಕಳೆದುಕೊಂಡು 102 ರನ್‌ಗೆ ಎಲ್ಲಾ ವಿಕೆಟ್ ಒಪ್ಪಿಸಿದರು. ಅಶ್ವಿನ್  25 ರನ್ ನೀಡಿ 10 ಓವರುಗಳಲ್ಲಿ 4 ವಿಕೆಟ್ ಕಬಳಿಸಿ ಅಗ್ರಮಾನ್ಯ ಬೌಲರ್ ಎನಿಸಿದರು. ಉಳಿದಂತೆ ಜಡೇಜಾ ಮತ್ತು ಉಮೇಶ್ ಯಾದವ್ ತಲಾ ಎರಡು ವಿಕೆಟ್ ಮತ್ತು ಮೋಹಿತ್ ಶರ್ಮಾ ಹಾಗೂ ಭುವನೇಶ್ವರ್ ಕುಮಾರ್ ತಲಾ ಒಂದು ವಿಕೆಟ್ ಗಳಿಸಿದರು.

ಯುಎಇ 50 ಪೂರ್ಣ ಓವರುಗಳನ್ನು ಮುಗಿಸಲು ವಿಫಲರಾಗಿ 31.3 ಓವರುಗಳಲ್ಲೇ ಆಲೌಟಾಯಿತು. ನಂತರ ಆಡಲಿಳಿದ ಭಾರತ ತಂಡದ ಪರ ಶಿಖರ್ ಧವನ್  14 ರನ್‌ಗಳಾಗಿದ್ದಾಗ ನವೀದ್‌ ಬೌಲಿಂಗ್‌ನಲ್ಲಿ ಕ್ಯಾಚಿತ್ತು ಔಟಾದರು. ರೋಹಿತ್ ಶರ್ಮಾ 31 ಎಸೆತಕ್ಕೆ 28 ಮತ್ತು ವಿರಾಟ್ ಕೊಹ್ಲಿ 16 ಎಸೆತಕ್ಕೆ 12 ರನ್‌ಗಳೊಂದಿಗೆ ಬ್ಯಾಟಿಂಗ್ ಆಡುತ್ತಿದ್ದು, ಭಾರತ ಸುಲಭವಾಗಿ ಈ ಸ್ಕೋರನ್ನು ಮುಟ್ಟಿ ಗೆಲ್ಲುವುದು ಖಚಿತವಾಗಿದೆ. 

ವೆಬ್ದುನಿಯಾವನ್ನು ಓದಿ