ಏಕದಿನ ಕ್ರಿಕೆಟ್‌‍ಗೆ ನಿವೃತ್ತಿ ತಳ್ಳಿಹಾಕಿದ ಟೀಂ ಇಂಡಿಯಾ ನಾಯಕ ಧೋನಿ

ಗುರುವಾರ, 26 ಮಾರ್ಚ್ 2015 (18:28 IST)
ಭಾರತದ ನಾಯಕ ಮಹೇಂದ್ರ ಸಿಂಗ್ ಧೋನಿ ಭಾರತ ತಂಡ ಐಸಿಸಿ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಸೋತ ಬಳಿಕ ಏಕ ದಿನ ಪಂದ್ಯಗಳಿಂದ ನಿವೃತ್ತಿಯಾಗುವ ವಿಷಯವನ್ನು ತಳ್ಳಿಹಾಕಿದ್ದಾರೆ. ನನಗೆ 33 ವರ್ಷಗಳಾಗಿದ್ದು, ಇನ್ನೂ ಫಿಟ್ ಆಗಿದ್ದೇನೆ. ನಾನು ವಿಶ್ವಕಪ್ 2019ರಲ್ಲಿ ಆಡುವ ಬಗ್ಗೆ ನಿರ್ಧರಿಸಲು ಮುಂದಿನ ವರ್ಷ (ವಿಶ್ವ ಟಿ 20ಯಲ್ಲಿ) ಸರಿಯಾದ  ಸಂದರ್ಭ ಎಂದು ಧೋನಿ ನಿವೃತ್ತಿ ಕುರಿತು ಸ್ಪಷ್ಟನೆ ನೀಡಿದ್ದಾರೆ. 

 ಭಾರತ ಟೆಸ್ಟ್ ಸರಣಿಯಲ್ಲಿ ಸೋತ ಬಳಿಕ ಧೋನಿ ದಿಢೀರ್ ನಿವೃತ್ತಿ ಘೋಷಣೆ ಮೂಲಕ ಕ್ರಿಕೆಟ್ ಜಗತ್ತಿಗೆ ಅಚ್ಚರಿ ಮೂಡಿಸಿದ್ದರು. ವಿಶ್ವಕಪ್‌ನಲ್ಲಿ ಭಾರತದ ಅಭಿಯಾನ ಮುಗಿದ ಬಳಿಕ ಧೋನಿ ಇದೇ ರೀತಿ ಏಕ ದಿನ ಪಂದ್ಯಗಳಿಂದ ನಿವೃತ್ತಿಯಾಗುತ್ತಾರೆಂದು ನಿರೀಕ್ಷಿಸಲಾಗಿತ್ತು. ತಮ್ಮ ನಿವೃತ್ತಿಯ ಬಗ್ಗೆ ಊಹಾಪೋಹ ಮಾಡಿದ ಮಾಧ್ಯಮವನ್ನು ಅವರು ಟೀಕಿಸಿದರು.

  ಧೋನಿ ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್ ಪಂದ್ಯದ ಬಗ್ಗೆ ಮಾತನಾಡುತ್ತಾ, ಟಾಸ್ ಸೋತಾಗ ನನಗೆ ನಿರಾಸೆಯಾಗಿತ್ತು. ನಮ್ಮ ಬೌಲರುಗಳು ಇನ್ನಷ್ಟು ಚೆನ್ನಾಗಿ ಬೌಲ್ ಮಾಡಬಹುದಿತ್ತು.  ನಾವು ಸೋತಿರೋದು ನಿಜವಾದ್ರೂ ನಮ್ಮ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಟೂರ್ನಿಯಲ್ಲಿ ನಮ್ಮ ವೇಗಿಗಳು ಸಾಕಷ್ಟು ಕಲಿತಿದ್ದಾರೆ. ನಮ್ಮ ಆಟಗಾರರ ಮೇಲೆ ಅತೀವ ಒತ್ತಡವಿದ್ದಿದ್ದು ಕೂಡ ಸೋಲಿಗೆ ಕಾರಣಗಳಲ್ಲಿ ಒಂದು ಎಂದು ಧೋನಿ ಹೇಳಿದರು. 

ನೀವು ಸಂಶೋಧನೆ ಕೈಗೊಂಡು ನಂತರ ಸಂಪೂರ್ಣ ವಿರುದ್ಧವನ್ನು ಬರೆಯುತ್ತೀರಿ. ಏಕೆಂದರೆ ಅದು ನಿಜಾಂಶವಾಗಿದೆ. ನಾನು ಆಟದ ಖುಷಿಗಾಗಿ ಆಡುತ್ತೇನೆ. ನಾನು ನಿರ್ಗಮಿಸಬೇಕೆಂದು ನಿರ್ಧರಿಸಿದ ದಿನ ಚೀಲವನ್ನು ಪ್ಯಾಕ್ ಮಾಡಿ ಸಂತೋಷದಿಂದ ಹೋಗುತ್ತೇನೆ ಎಂದು ಧೋನಿ ಹೇಳಿದರು.  ಆಸ್ಟ್ರೇಲಿಯಾದ ನಾಯಕ ಮೈಕೇಲ್ ಕ್ಲಾರ್ಕ್ ಪಂದ್ಯದ ನಂತರದ ಬಹುಮಾನ ವಿತರಣೆ ಸಮಾರಂಭದಲ್ಲಿ ಧೋನಿಯನ್ನು ಆಲಂಗಿಸಿಕೊಂಡು, ಧೋನಿ 2019ರ ವಿಶ್ವಕಪ್ ಖಂಡಿತವಾಗಿ  ಆಡುತ್ತಾರೆಂದು ಹೇಳಿದರು.

ವೆಬ್ದುನಿಯಾವನ್ನು ಓದಿ