ಕಾಟಾಚಾರಕ್ಕೆ ನಡೆಯುತ್ತಿದೆಯಾ ಟೀಂ ಇಂಡಿಯಾ ಕೋಚ್ ಆಯ್ಕೆ ಪ್ರಕ್ರಿಯೆ?
ಭಾನುವಾರ, 28 ಜುಲೈ 2019 (09:08 IST)
ಮುಂಬೈ: ಟೀಂ ಇಂಡಿಯಾ ಹಾಲಿ ಕೋಚ್ ರವಿಶಾಸ್ತ್ರಿ ಅವಧಿ ಮುಕ್ತಾಯವಾದ ಹಿನ್ನಲೆಯಲ್ಲಿ ಹೊಸ ಕೋಚ್ ಆಯ್ಕೆಗೆ ಬಿಸಿಸಿಐ ಅರ್ಜಿ ಆಹ್ವಾನಿಸಿದ್ದು, ಕಪಿಲ್ ದೇವ್ ನೇತೃತ್ವದ ಸಮಿತಿ ಹೊಸ ಕೋಚ್ ಆಯ್ಕೆ ಮಾಡುವುದಾಗಿ ಹೇಳಿದೆ.
ಆದರೆ ಈ ಆಯ್ಕೆ ಪ್ರಕ್ರಿಯೆ ಕೇವಲ ಕಾಟಾಚಾರಕ್ಕೆ ನಡೆಯುತ್ತಿದೆ ಎನ್ನಲಾಗುತ್ತಿದೆ. ನಾಯಕ ವಿರಾಟ್ ಕೊಹ್ಲಿ ಜತೆಗೆ ಉತ್ತಮ ಬಾಂಧವ್ಯ ಹೊಂದಿರುವ ರವಿಶಾಸ್ತ್ರಿಯನ್ನೇ ಮತ್ತೆ ಕೋಚ್ ಆಗಿ ಆಯ್ಕೆ ಮಾಡುವುದಾಗಿ ಸಲಹಾ ಸಮಿತಿ ಸದಸ್ಯರಲ್ಲೊಬ್ಬರಾದ ಅಂಶುಮಾನ್ ಗಾಯಕ್ ವಾಡ್ ಸುಳಿವು ನೀಡಿದ್ದಾರೆ.
ಅನಿಲ್ ಕುಂಬ್ಳೆ-ಕೊಹ್ಲಿ ವೈಮನಸ್ಯದ ನಂತರ ಬಿಸಿಸಿಐ ಕೂಡಾ ನಾಯಕನ ಮೆಚ್ಚಿನ ಕೋಚ್ ಆಯ್ಕೆ ಮಾಡುವುದರತ್ತಲೇ ಹೆಚ್ಚು ಒಲವು ಹೊಂದಿದೆ. ಹೀಗಾಗಿ ಸದ್ಯಕ್ಕೆ ಕೊಹ್ಲಿ ಮೆಚ್ಚಿನ ರವಿಶಾಸ್ತ್ರಿಯನ್ನೇ ಆಯ್ಕೆ ಮಾಡುವ ಸಿದ್ಧತೆಯಲ್ಲಿದೆ. ಹಾಗಾಗಿ ಮುಖ್ಯ ಕೋಚ್ ಆಯ್ಕೆ ವಿಚಾರ ಕೇವಲ ಕಾಟಾಚಾರಕ್ಕೆ ನಡೆಯುತ್ತಿದೆ ಎನ್ನುವುದು ಸ್ಪಷ್ಟವಾಗಿದೆ.
ಆದರೆ ಬ್ಯಾಟಿಂಗ್ ಮತ್ತು ಬೌಲಿಂಗ್ ಕೋಚ್ ಹುದ್ದೆಗಳು ಇನ್ನೂ ಮುಕ್ತವಾಗಿದೆ ಎಂದು ಗಾಯಕ್ ವಾಡ್ ಹೇಳಿದ್ದಾರೆ. ಹೀಗಾಗಿ ಈ ಕೋಚಿಂಗ್ ಸ್ಥಾನಗಳಿಗೆ ಹೊಸಬರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ.