ಯಾರು ಏನೇ ಮಾಡಲಿ ಗೆಲ್ಲಲು ರವೀಂದ್ರ ಜಡೇಜಾ ಮ್ಯಾಜಿಕ್ ಮಾಡಲೇಬೇಕು!

ಭಾನುವಾರ, 19 ಮಾರ್ಚ್ 2017 (16:40 IST)
ರಾಂಚಿ: ತೃತೀಯ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ ಪೂಜಾರ ದ್ವಿಶತಕ  ಗಳಿಸಿದರು. ವೃದ್ಧಿಮಾನ್ ಸಹಾ ಶತಕ ಗಳಿಸಿದರು. ಆದರೂ ಗೆಲ್ಲಬೇಕಾದರೆ ರವೀಂದ್ರ ಜಡೇಜಾನೇ ಬೇಕು ಎಂದು ಮತ್ತೊಮ್ಮೆ ಸಾಬೀತಾಯಿತು.

 

 ಭಾರತದ ಮೊದಲ ಇನಿಂಗ್ಸ್ ನಲ್ಲಿ ಪೂಜಾರ (202),  ಸಹಾ (117) ಗಳಿಸಿ ತಂಡವನ್ನು ಸುರಕ್ಷಿತಗೊಳಿಸಿದರು. ಆದರೆ ಕೊನೆಯಲ್ಲಿ ಬಂದ ಜಡೇಜಾ ಬೀಡು ಬೀಸಾಗಿ ಬ್ಯಾಟ್ ಬೀಸಿ ವೇಗದ ಅರ್ಧಶತಕ ಗಳಿಸಿದ್ದರಿಂದ ಟೀಂ ಇಂಡಿಯಾ ಮೊತ್ತ 602 ಕ್ಕೆ ತಲುಪಿತು. 9 ವಿಕೆಟ್ ಗೆ 602 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡ ಭಾರತ ಮಹತ್ವದ 152 ರನ್ ಮುನ್ನಡೆ ಸಾಧಿಸಿತು.

 

ದ್ವಿತೀಯ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ದಿನದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 23 ರನ್ ಗಳಿಸಿದೆ. ಅಪಾಯಕಾರಿ ಡೇವಿಡ್ ವಾರ್ನರ್ ರನ್ನು ಮತ್ತೊಮ್ಮೆ ತಮ್ಮ ಬಲೆಗೆ ಕೆಡವಿದ ಜಡೇಜಾ ನೈಟ್ ವಾಚ್ ಮನ್ ನಥನ್ ಲಯಾನ್ ವಿಕೆಟ್ ಕೂಡಾ ಕಬಳಿಸಿ ಗೆಲುವಿನ ಆಸೆ ಚಿಗುರಿಸಿದ್ದಾರೆ. ಹಿಂದೊಮ್ಮೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲೂ ಜಡೇಜಾ ಇದೇ ರೀತಿ ಅಸಾಧ್ಯವಾಗಿದ್ದ ಪಂದ್ಯವನ್ನು ಕೊನೆಯ ದಿನ ಟೀಂ ಇಂಡಿಯಾ ತೆಕ್ಕೆಗೆ ಬೀಳುವಂತೆ ಮಾಡಿದ್ದರು.

 
ಈ ಪಂದ್ಯದಲ್ಲೂ ಅದೇ ರೀತಿ ಎದುರಾಳಿಗಳನ್ನು ತಮ್ಮ ಬಲೆಗೆ ಕೆಡವಿ ಪಂದ್ಯ ಗೆದ್ದುಕೊಡುತ್ತಾರಾ ಎಂದು ನಾಳೆಯವರೆಗೆ ಕಾದು ನೋಡಬೇಕು.  ಈ ನಡುವೆ ತಮ್ಮ ದ್ವಿಶತಕ ಗಳಿಸಲು 525 ಬಾಲ್ ಎದುರಿಸಿದ ಪೂಜಾರ ಅತೀ ಹೆಚ್ಚು ಎಸೆತ ಎದುರಿಸಿದ ದಾಖಲೆಯನ್ನೂ ಮಾಡಿದರು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ