ಭಾರತ-ಇಂಗ್ಲೆಂಡ್ ಏಕದಿನ: ಬೌಲರ್ ಗಳ ಶ್ರಮವನ್ನು ಬ್ಯಾಟಿಗರು ವ್ಯರ್ಥ ಮಾಡಿದರು!
ಶುಕ್ರವಾರ, 15 ಜುಲೈ 2022 (08:10 IST)
ಲಂಡನ್: ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ನಡೆದ ಭಾರತ-ಇಂಗ್ಲೆಂಡ್ ಏಕದಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ ಗಳ ಶ್ರಮವನ್ನು ಬ್ಯಾಟಿಗರು ನೀರಿನಲ್ಲಿ ಹೋಮ ಮಾಡಿದಂತೆ ವ್ಯರ್ಥ ಮಾಡಿ ತಂಡದ ಸೋಲಿಗೆ ಕಾರಣವಾದರು.
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 49 ಓವರ್ ಗಳಲ್ಲಿ 246 ರನ್ ಗಳಿಗೆ ಆಲೌಟ್ ಆಯಿತು. ಜಾನಿ ಬೇರ್ ಸ್ಟೋ 38, ಲಿವಿಂಗ್ ಸ್ಟೋನ್ 33 ರನ್ ಗಳಿಸಿದರು. ಕೊನೆಯ ಕ್ರಮಾಂಕದಲ್ಲಿ ಮೊಯಿನ್ ಅಲಿ ಅಮೂಲ್ಯ 47 ರನ್ ಮತ್ತು ಡೇವಿಡ್ ವಿಲ್ಲಿ 41 ರನ್ ಗಳ ಕೊಡುಗೆ ನೀಡಿದ್ದು ಇಂಗ್ಲೆಂಡ್ ಗೌರವಯುತ ಮೊತ್ತ ಗಳಿಸಲು ನೆರವಾಯಿತು. ಭಾರತದ ಪರ ಯಜುವೇಂದ್ರ ಚಾಹಲ್ 4, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ 2, ಪ್ರಸಿದ್ಧ ಕೃಷ್ಣ, ಮೊಹಮ್ಮದ್ ಶಮಿ ತಲಾ 1 ವಿಕೆಟ್ ಕಬಳಿಸಿದರು. ಪ್ರಸಿದ್ಧ ಕೃಷ್ಣ ಅತಿ ದುಬಾರಿ ಎನಿಸಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಕ್ಕೆ ಆರಂಭದಲ್ಲೇ ರೋಹಿತ್ ಶರ್ಮಾ ರೂಪದಲ್ಲಿ ಆಘಾತ ಸಿಕ್ಕಿತು. ರೋಹಿತ್, ರಿಷಬ್ ಪಂತ್ ಶೂನ್ಯಕ್ಕೆ ನಿರ್ಗಮಿಸಿದರು. ಭಾರೀ ನಿರೀಕ್ಷೆಯಿಟ್ಟುಕೊಂಡಿದ್ದ ವಿರಾಟ್ ಕೊಹ್ಲಿ 16, ಶಿಖರ್ ಧವನ್ 9 ರನ್ ಗೆ ಔಟಾದರು. ಸೂರ್ಯಕುಮಾರ್ ಯಾದವ್ 27, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ತಲಾ 29 ಮತ್ತು ಮೊಹಮ್ಮದ್ ಶಮಿ 23 ರನ್ ಗಳಿಸದೇ ಹೋಗಿದ್ದಲ್ಲಿ ಭಾರತ 100 ರೊಳಗೆ ಆಲೌಟ್ ಆಗುತ್ತಿತ್ತು. ಆದರೆ ಅಂತಿಮವಾಗಿ 38.5 ಓವರ್ ಗಳಲ್ಲಿ 146 ರನ್ ಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಮಾರಕ ದಾಳಿ ಸಂಘಟಿಸಿದ ರೀಸ್ ಟೋಪ್ಲೆ 6 ವಿಕೆಟ್ ಕಬಳಿಸಿದರು.