ಹಾರ್ದಿಕ್ ಪಾಂಡ್ಯ ಪಡೆಗೆ ಮತ್ತೊಮ್ಮೆ ಮುಖಭಂಗ

ಸೋಮವಾರ, 7 ಆಗಸ್ಟ್ 2023 (08:10 IST)
ಗಯಾನ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟಿ20 ಪಂದ್ಯವನ್ನೂ ಸೋತ ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಂ ಇಂಡಿಯಾ ಮುಖಭಂಗ ಅನುಭವಿಸಿದೆ.

ಏಕದಿನ ಸರಣಿಯ ಆರಂಭದಲ್ಲಿ ಹಾರ್ದಿಕ್ ಪಾಂಡ್ಯ ಪ್ರಸ್ತುತ ಟೀಂ ಇಂಡಿಯಾ ಎರಡು ತಂಡಗಳನ್ನು ಒಂದೇ ಸಮಯದಲ್ಲಿ ಬೇರೆ ಬೇರೆ ಟೂರ್ನಿಗೆ ಕಳುಹಿಸಿದರೂ ಗೆಲ್ಲುವ ಪ್ರತಿಭಾವಂತರಿದ್ದಾರೆ ಎಂದು ಬೀಗಿದ್ದರು. ಆದರೆ ಈಗ ಟಿ20 ಸರಣಿಯ ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸಿ ತಮ್ಮ ಮಾತಿಗೆ ತಾವೇ ಪಶ್ಚಾತ್ತಾಪ ಪಡುವಂತಾಗಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಹಾಗಿದ್ದರೂ ಯುವ ಕ್ರಿಕೆಟಿಗ ತಿಲಕ್ ವರ್ಮ ಅರ್ಧಶತಕದ ನೆರವಿನಿಂದ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತು. ತಿಲಕ್ 41 ಎಸೆತಗಳಿಂದ 51 ರನ್ ಗಳಿಸಿದರು. ಇಶಾನ್ ಕಿಶನ್ 27, ಹಾರ್ದಿಕ್ ಪಾಂಡ್ಯ 24 ರನ್, ಅಕ್ಸರ್ ಪಟೇಲ್‍ 14 ರನ್ ಗಳಿಸಿದರು. ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ಶುಬ್ಮನ್ ಗಿಲ್ ಮತ್ತೆ ವೈಫಲ್ಯ ಅನುಭವಿಸಿದ್ದು ಭಾರತಕ್ಕೆ ದುಬಾರಿಯಾಯಿತು.

ಈ ಮೊತ್ತ ಬೆನ್ನತ್ತಿದ ವಿಂಡೀಸ್ ಆರಂಭದ ಓವರ್ ನಲ್ಲಿಯೇ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ನಿಕಲಸ್ ಪೂರನ್ ಕ್ರೀಸ್ ಗೆ ಬಂದ ಮೇಲೆ ಪಂದ್ಯದ ಚಿತ್ರಣವೇ ಬದಲಾಯಿತು. ಹೊಡೆಬಡಿಯ ಆಟಗಾರ 40 ಎಸೆತಗಳಿಂದ 67 ರನ್ ಚಚ್ಚಿ ಪಂದ್ಯವನ್ನೂ ಸಂಪೂರ್ಣವಾಗಿ ವಿಂಡೀಸ್ ಪರ ವಾಲುವಂತೆ ಮಾಡಿದರು. ಅಂತಿಮವಾಗಿ ವಿಂಡೀಸ್ 18.5 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್ ಗಳಿಸುವ ಮೂಲಕ 2 ವಿಕೆಟ್ ಗಳ ಗೆಲುವು ಸಂಪಾದಿಸಿತು. ಇದರೊಂದಿಗೆ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಸಾಧಿಸಿತು. ಭಾರತದ ಪರ ನಾಯಕ ಹಾರ್ದಿಕ್ 3, ಯಜುವೇಂದ್ರ ಚಾಹಲ್ 2, ಅರ್ಷ್ ದೀಪ್ ಸಿಂಗ್, ಮುಕೇಶ್ ಕುಮಾರ್ ತಲಾ 1 ವಿಕೆಟ್ ಕಬಳಿಸಿದರು. ಅಕ್ಸರ್ ಪಟೇಲ್ ಮತ್ತೊಮ್ಮೆ ವಿಕೆಟ್ ಕೀಳಲು ವಿಫಲರಾದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ