ಕಾರ್ಡಿಫ್: ಭಾರತ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕ, ವಿಕೆಟ್ ಕೀಪರ್ ಧೋನಿಗೆ ಇಂದು ಜನ್ಮ ದಿನದ ಸಂಭ್ರಮ. ಆದರೆ ಧೋನಿಗೆ ಟೀಂ ಇಂಡಿಯಾ ಗೆಲುವಿನ ಉಡುಗೊರೆ ನೀಡಲು ವಿಫಲವಾಗಿದೆ.
ಇಂಗ್ಲೆಂಡ್ ವಿರುದ್ಧ ನಿನ್ನೆ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ 5 ವಿಕೆಟ್ ಗಳಿಂದ ಗೆಲ್ಲುವ ಮೂಲಕ ಸರಣಿ ಸಮಬಲ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿತು.
ಭಾರತದ ಪರ ನಾಯಕ ವಿರಾಟ್ ಕೊಹ್ಲಿ 38 ಎಸೆತಗಳಲ್ಲಿ 47 ರನ್, ಧೋನಿ 24 ಎಸೆತಗಳಲ್ಲಿ 32 ಹಾಗೂ ಸುರೇಶ್ ರೈನಾ 27 ರನ್ ಗಳಿಸಿದ್ದು ಬಿಟ್ಟರೆ ಉಳಿದವರಾರೂ ಚೆನ್ನಾಗಿ ಆಡಲಿಲ್ಲ. ಆರಂಭಿಕ ಆಘಾತ ಭಾರತದ ಸಾಧಾರಣ ಮೊತ್ತಕ್ಕೆ ಕಾರಣವಾಯಿತು.
ಇದಾದ ಬಳಿಕ ಬ್ಯಾಟಿಂಗ್ ಗೆ ಇಳಿದ ಇಂಗ್ಲೆಂಡ್ ಕೂಡಾ ಆರಂಭದಲ್ಲಿ ತಡವರಿಸಿತಾದರೂ ಮಧ್ಯಮ ಕ್ರಮಾಂಕದಲ್ಲಿ ಅಲೆಕ್ಸ್ ಹೇಲ್ಸ್ 51 ರನ್ ಗಳಿಸಿ ತಂಡಕ್ಕೆ ಗೆಲುವು ಕೊಡಿಸಿದರು. ದುರಾದೃಷ್ಟವೆಂದರೆ ಕಳೆದ ಪಂದ್ಯದಲ್ಲಿ ಐದು ವಿಕೆಟ್ ಕಿತ್ತಿದ್ದ ಕುಲದೀಪ್ ಯಾದವ್ ಈ ಪಂದ್ಯದಲ್ಲಿ ಒಂದೂ ವಿಕೆಟ್ ಕೀಳಲಿಲ್ಲ. ಭಾರತದ ಸ್ಪಿನ್ನರ್ ಗಳನ್ನು ಇಂಗ್ಲೆಂಡ್ ಕ್ರಿಕೆಟಿಗರು ಸಮರ್ಥವಾಗಿ ಎದುರಿಸಿದ್ದು ಈ ಪಂದ್ಯದ ಸೋಲಿಗೆ ಕಾರಣವಾಯಿತು. ಇದರೊಂದಿಗೆ ಇಂಗ್ಲೆಂಡ್ ಒಂದೇ ಮೈದಾನದಲ್ಲಿ ಅತೀ ಹೆಚ್ಚು ಬಾರಿ ತಂಡವೊಂದು ಗೆದ್ದ ವಿಶ್ವ ದಾಖಲೆ ಮಾಡಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.