ಹಲ್ಲಿಲ್ಲದ ಹಾವಿನ ಜತೆ ಸೆಣಸಾಡಲು ಟೀಂ ಇಂಡಿಯಾ ರೆಡಿ!

ಕೃಷ್ಣವೇಣಿ ಕೆ

ಬುಧವಾರ, 7 ಜೂನ್ 2017 (08:19 IST)
ಲಂಡನ್: ಪಾಕಿಸ್ತಾನದ ಜತೆ ಸುರಿಯುತ್ತಿದ್ದ ಮಳೆಯ ನಡುವೆಯೇ ನೀರು ಕುಡಿದಷ್ಟು ಸುಲಭವಾಗಿ ಗೆದ್ದು ಬೀಗಿದ್ದಾಯ್ತು. ಇದೀಗ ಬಲಭೀಮ ಟೀಂ ಇಂಡಿಯಾ ಪಡೆಯ ಎದುರು ಹಲ್ಲಿಲ್ಲದ ಹಾವಿನಂತಾಗಿರುವ ಲಂಕಾ ಎದುರಾಗುತ್ತಿದೆ.

 
ಇಂದು ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಭಾರತಕ್ಕೆ ಲಂಕಾ ಎದುರಾಳಿ. ಒಂದು ಕಾಲದಲ್ಲಿ ಇದೂ ಉಪಖಂಡದ ದೈತ್ಯ ಶಕ್ತಿಯೇ. ಆದರೆ ಈಗ ಎಲ್ಲಾ ವಿಭಾಗದಲ್ಲೂ ಬಡವಾಗಿದೆ.

ಸನತ್ ಜಯಸೂರ್ಯ, ಸಂಗಕ್ಕಾರ, ಮುತ್ತಯ್ಯ ಮುರಳೀಧರನ್ ಅಬ್ಬರಿಸುತ್ತಿದ್ದ ಲಂಕಾ ತಂಡಕ್ಕೂ ಈಗಿನ ತಂಡಕ್ಕೂ ಅಜಗಜರಾಂತ ವ್ಯತ್ಯಾಸವಿದೆ. ಗಾಯದ ಮೇಲೆ ಬರೆ ಎನ್ನುವಂತೆ ಏಕೈಕ ಭರವಸೆಯಾಗಿದ್ದ ನಾಯಕ ಆಂಜಲೋ ಮ್ಯಾಥ್ಯೂಸ್ ಗಾಯಗೊಂಡು ಮನೆ ಸೇರಿಕೊಂಡಿದ್ದಾರೆ. ಹಂಗಾಮಿ ನಾಯಕನೆನಿಸಿಕೊಂಡಿದ್ದ ಉಪುಲ್ ತರಂಗಾ ಅಮಾನತಿನ ಶಿಕ್ಷೆಯಲ್ಲಿದ್ದಾರೆ.

ಹೀಗಿರುವಾಗ ಲಂಕಾ ತಂಡಕ್ಕೆ ಸಾರಥಿಯದ್ದೇ ಚಿಂತೆ. ಹೀಗಿರುವಾಗ ರಥ ಮುಂದೆ ಹೋಗುವ ಮಾತೆಲ್ಲಿ ಬಂತು? ಸದ್ಯಕ್ಕೆ ಲಸಿತ್ ಮಲಿಂಗಾ ಒಬ್ಬರೇ ಲಂಕಾ ತಂಡದ ಹಿರಿಯ. ಉಳಿದಂತೆ ಯುವ ಅನನುಭವಿ ತಂಡ ಭಾರತಕ್ಕೆ ಯಾವ ಹಂತದಲ್ಲೂ ಸವಾಲು ಎಸೆಯಲು ಅಸಾಧ್ಯವೆನ್ನುವಂತಹ ಪರಿಸ್ಥಿತಿಯಲ್ಲಿದೆ.

ಅತ್ತ ಟೀಂ ಇಂಡಿಯಾದಲ್ಲಿ ಎಲ್ಲರೂ ಇನ್ ಫಾರ್ಮ್ ನಲ್ಲಿರುವವರೇ. ಇದರಿಂದಾಗಿ ಆಡುವ ಬಳಗವನ್ನು ಆರಿಸುವ ತಲೆಬಿಸಿ ನಾಯಕನಿಗೆ. ಕಳೆದ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಅವರೇ ಹೊರಗುಳಿಯಬೇಕಾಗಿ ಬಂದಿತ್ತು. ಇಂದಿನ ಪಂದ್ಯದಲ್ಲಿ ಅವರು ಆಡುತ್ತಾರಾ ಅಥವಾ ಅವರಿಗಾಗಿ ರವೀಂದ್ರ ಜಡೇಜಾ ಸ್ಥಾನ ಬಿಟ್ಟುಕೊಡುತ್ತಾರಾ ನೋಡಬೇಕು.

ಎಲ್ಲಕ್ಕಿಂತ ಹೆಚ್ಚು ವರುಣ ದೇವನ ಕೃಪೆ ಬೇಕು. ಇದುವರೆಗೆ ಎಲ್ಲಾ ತಂಡಗಳೂ ಮಳೆಯ ಅಡಚಣೆಯ ನಡುವೆಯೇ ಪಂದ್ಯ ಮುಗಿಸಿವೆ. ಇಂದೂ ಹಾಗಾಗದೇ ಪೂರ್ಣ ಓವರ್ ಆಟ ನಡೆದರೆ ಸಾಕು ಎಂದು ಭಾರತ ಪ್ರಾರ್ಥಿಸಬೇಕಿದೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ