ಸ್ಲೋ ಮೋಷನ್ ನಲ್ಲಿ ಸಾಗಿದ ಟೀಂ ಇಂಡಿಯಾ!

ಶನಿವಾರ, 18 ಮಾರ್ಚ್ 2017 (16:33 IST)
ರಾಂಚಿ: ನಿಧಾನವೇ ಪ್ರಧಾನ ಎನ್ನುವುದನ್ನು ಟೀಂ ಇಂಡಿಯಾ ಅತಿಯಾಗಿ ಹಚ್ಚಿಕೊಂಡ ಹಾಗೆ ಕಾಣುತ್ತಿದೆ. ಹಾಗಾಗಿ ಇಂದು ದಿನವಿಡೀ ಆಡಿ ಮಾಡಿದ್ದು 239 ರನ್. ಅಂದರೆ ಮೂರನೇ ದಿನದಂತ್ಯಕ್ಕೆ ಟೀಂ ಇಂಡಿಯಾ ಸ್ಕೋರ್ 6 ವಿಕೆಟ್ ಗೆ 360 ರನ್.

 

ಚೇತೇಶ್ವರ ಪೂಜಾರ ಈಗಾಗಲೇ ಶತಕ ಭಾರಿಸಿದ್ದರೂ, ಅದಕ್ಕಾಗಿ ಭರ್ತಿ 300 ಎಸೆತಗಳನ್ನು ಎದುರಿಸಿದ್ದಾರೆ. ಆಗಾಗ ತುಂತುರು ಮಳೆಯಂತೆ ಒಂಟಿ ರನ್ ತೆಗೆಯುವುದು ಬಿಟ್ಟರೆ, ಟೀಂ ಇಂಡಿಯಾ ರನ್ ಗಳಿಸುವುದಕ್ಕಿಂತ ಹೆಚ್ಚು ವಿಕೆಟ್ ಉಳಿಸಿಕೊಳ್ಳುವುದರತ್ತಲೇ ಗಮನ ಕೊಟ್ಟಂತಿತ್ತು. ಆಸ್ಟ್ರೇಲಿಯಾಕ್ಕೆ ಕೂಡಾ ಇದೇ ಬೇಕಾಗಿತ್ತು.

 
ಹೀಗಾಗಿ ಆಸ್ಟ್ರೇಲಿಯಾದ ಮೊದಲ ಇನಿಂಗ್ಸ್ ಮೊತ್ತ ಹಿಂದಿಕ್ಕಲು ಇನ್ನೂ 91 ರನ್ ಗಳ ಅಗತ್ಯವಿದೆ. ಆದರೆ ಅಷ್ಟರಲ್ಲಿ ಮೂರು ದಿನ ಕಳೆದಿದೆ. ಇನ್ನುಳಿದ ಎರಡು ದಿನದಲ್ಲಿ ಫಲಿತಾಂಶ ಪಡೆಯುವುದು ಸುಲಭವಲ್ಲ. ಅದಕ್ಕೆ ಬೌಲರ್ ಗಳು ಮ್ಯಾಜಿಕ್ ಮಾಡಬೇಕು. ಅದು ಇಂತಹ ಪಿಚ್ ನಲ್ಲಿ!

 
ವಿರಾಟ್ ಕೊಹ್ಲಿ ಕೊಂಚ ಹೊತ್ತು ನಿಂತು ಆಕ್ರಮಣಕಾರಿ ಆಟವಾಡುತ್ತಿದ್ದರೆ, ರನ್ ಗತಿ ಸ್ವಲ್ಪ ಮಟ್ಟಿಗೆ ಏರುತ್ತಿತ್ತು. ಆದರೆ ಕೊಹ್ಲಿ ಬಂದ ದಾರಿಗೇ ಹಿಂತಿರುಗಿದರು. ಯಾಕೋ ಈ ಸರಣಿಯಲ್ಲಿ ಒಮ್ಮೆಯೂ ಕೊಹ್ಲಿ ಸ್ಕೋರ್ 20 ದಾಟಿಲ್ಲ. ಭರವಸೆಯ ಆಟಗಾರ ಅಜಿಂಕ್ಯಾ ರೆಹಾನೆ ಕೂಡಾ ಇಂದು ತುಂಬಾ ಹೊತ್ತು ನಿಲ್ಲಲ್ಲಿಲ್ಲ. ಕರುಣ್ ನಾಯರ್ ಅಬ್ಬರ ಬಹುಶಃ ಅಂದಿನ ತ್ರಿಶತಕಕ್ಕೇ ಕೊನೆಯಾದಂತಿದೆ.

 
ಸದ್ಯಕ್ಕೆ ನಿಧಾನಿಯಾದರೂ, 130 ರನ್ ಗಳಿಸಿ ಆಡುತ್ತಿರುವ ಪೂಜಾರನೇ ಭಾರತದ ಏಕೈಕ ಭರವಸೆ. ಇದು ಟೀಂ ಇಂಡಿಯಾ ನಾಲ್ಕನೇ ಸ್ಲೋ ಸ್ಕೋರಿಂಗ್ ಪಂದ್ಯವೆನಿಸಿತು. ಪ್ರತಿ ಓವರ್ ಗೆ ಕೇವಲ  2.76  ರನ್ ಸರಾಸರಿಯಲ್ಲಿ ಭಾರತ ಆಡಿತು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ