ಹ್ಯಾಮಿಲ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಅತಿಥೇಯ ಬೌಲರ್ ಗಳನ್ನು ಬೆಂಡಾಡಿ 348 ರನ್ ಗಳ ಬೃಹತ್ ಗೆಲುವಿನ ಗುರಿ ನೀಡಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಪರ ಎಲ್ಲಾ ಬ್ಯಾಟ್ಸ್ ಮನ್ ಗಳಿಂದಲೂ ಉತ್ತಮ ಜತೆಯಾಟವೇ ಬಂತು. ಆರಂಭಿಕರಾಗಿ ಇದೇ ಮೊದಲ ಬಾರಿ ಕಣಕ್ಕಿಳಿದ ಮಯಾಂಕ್ ಅಗರ್ವಾಲ್, ಪೃಥ್ವಿ ಶಾ ನಿಧಾನದ ಆದರೆ ಭದ್ರ ಅಡಿಪಾಯ ಹಾಕಿಕೊಟ್ಟರು. ಆದರೆ ಶಾ 20, ಮಯಾಂಕ್ 32 ರನ್ ಗಳಿಸಿ ಔಟಾದರು.
ಇದಾದ ಬಳಿಕ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಐಯರ್ ಮಧ‍್ಯಮ ಕ್ರಮಾಂಕದಲ್ಲಿ ಭದ್ರ ಬುನಾದಿ ಹಾಕಿದರು. ಕೊಹ್ಲಿ 51 ರನ್ ಗಳಿಸಿ ಔಟಾದರೆ ಶ್ರೇಯಸ್ ಏಕದಿನ ಪಂದ್ಯದಲ್ಲಿ ಚೊಚ್ಚಲ ಶತಕ (103) ಸಿಡಿಸಿ ಔಟಾದರು. ಇವರ ಬುನಾದಿ ಮೇಲೆ ನಿಂತ ಕೆಎಲ್ ರಾಹುಲ್ ಸಿಡಿಬಡಿಯ 88 ರನ್ ಗಳಿಸಿ ಮೊತ್ತ 340 ದಾಟಲು ನೆರವಾದರು. ರಾಹುಲ್ ಕೇವಲ 63 ಎಸೆತಗಳಲ್ಲಿ 88 ರನ್ ಗಳಿಸಿದರು. ಇನ್ನು ಕೇದಾರ್ ಜಾಧವ್ ಕೇವಲ 15 ಎಸೆತಗಳಲ್ಲಿ 26 ರನ್ ಗಳಿಸಿ ತಕ್ಕ ಸಾಥ್ ನೀಡಿದರು. ಇದರಿಂದಾಗಿ ಭಾರತ ನಿಗದಿತ 50 ಓವರ್ ಗಳಲ್ಲಿ ಭಾರತ 4 ವಿಕೆಟ್ ನಷ್ಟಕ್ಕೆ 347 ರನ್ ಗಳಿಸಿತು.