ಕೊನೆಗೂ ಅಡಿಲೇಡ್ ನಲ್ಲಿ ಆಸೀಸ್ ವಿರುದ್ಧ ಗೆದ್ದು ಇತಿಹಾಸ ನಿರ್ಮಿಸಿದ ಟೀಂ ಇಂಡಿಯಾ

ಸೋಮವಾರ, 10 ಡಿಸೆಂಬರ್ 2018 (10:49 IST)
ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ 31 ರನ್ ಗಳಿಂದ ಗೆಲ್ಲುವ ಮೂಲಕ ಕೊನೆಗೂ ಆಸ್ಟ್ರೇಲಿಯಾ ನೆಲದಲ್ಲಿ ಅಪರೂಪದ ಗೆಲುವು ದಾಖಲಿಸಿದೆ.


ಗೆಲುವಿಗೆ 323 ರನ್ ಗಳ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್ ನಲ್ಲಿ 291 ರನ್ ಗಳಿಗೆ ಆಲೌಟ್ ಆಗಿದೆ. ಇಂದಿನ ದಿನದಲ್ಲಿ ಆಸೀಸ್ ಬಾಲಂಗೋಚಿಗಳಿಂದ ಸಣ್ಣ ಸಣ್ಣ ಜತೆಯಾಟದಿಂದಾಗಿ ಪ್ರತಿರೋಧ ಎದುರಾದರೂ ಟೀಂ ಇಂಡಿಯಾ ಬೌಲರ್ ಗಳು ಸೂಕ್ತ ಸಮಯದಲ್ಲೇ ವಿಕೆಟ್ ಕೀಳುತ್ತಾ ಸಾಗಿದ್ದರಿಂದ ಗೆಲುವು ಭಾರತದ ಪಾಲಾಯಿತು.

ಅಂತಿಮವಾಗಿ ಜೋಶ್ ಹೇಝಲ್ ವುಡ್ ವಿಕೆಟ್ ನ್ನು ರವಿಚಂದ್ರನ್ ಅಶ್ವಿನ್ ಪಡೆಯುತ್ತಿದ್ದಂತೇ ಟೀಂ ಇಂಡಿಯಾ ಆಟಗಾರರು, ನೆರೆದಿದ್ದ ಅಭಿಮಾನಿಗಳ ಸಂತಸ ಮೇರೆ ಮೀರಿತ್ತು. ಕ್ರಿಕೆಟಿಗರು ಅಕ್ಷರಶಃ ಕುಣಿದಾಡಿಬಿಟ್ಟರು. ಭಾರತ ಆಸ್ಟ್ರೇಲಿಯಾದಲ್ಲಿ ಆಡಿದ ಟೆಸ್ಟ್ ಸರಣಿಗಳಲ್ಲಿ ಮೊದಲ ಪಂದ್ಯವನ್ನೇ ಗೆದ್ದ ದಾಖಲೆ ಇದುವರೆಗೆ ಮಾಡಿರಲಿಲ್ಲ. ಭಾರತ ಈ ಪಂದ್ಯದಲ್ಲಿ ತೋರಿದ ನಿರ್ವಹಣೆ ನಿಜಕ್ಕೂ ಸರಣಿಯ ಉಳಿದ ಪಂದ್ಯಗಳ ಫಲಿತಾಂಶ ನಿರ್ಧರಿಸುವಂತಿದೆ.

ಅಂತಿಮವಾಗಿ ದ್ವಿತೀಯ ಇನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ಪರ ಶಾನ್ ಮಾರ್ಷ್ 60 ಮತ್ತು ನಾಯಕ ಟಿಮ್ ಪೈಯ್ನ್ 41 ರನ್ ಗಳಿಸಿದರು. ಭಾರತದ ಪರ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ರವಿಚಂದ್ರನ್ ಅಶ್ವಿನ್ ತಲಾ ಮೂರು ವಿಕೆಟ್ ಕಬಳಿಸಿದರೆ ಉಳಿದೊಂದು ವಿಕೆಟ್ ಇಶಾಂತ್ ಶರ್ಮಾ ಪಾಲಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ