ಏಷ್ಯಾ ಕಪ್: ಕಾಲ ಮಿಂಚಿ ಹೋದ ಮೇಲೆ ಫಾರ್ಮ್ ಗೆ ಬಂದ ಟೀಂ ಇಂಡಿಯಾ
ಶುಕ್ರವಾರ, 9 ಸೆಪ್ಟಂಬರ್ 2022 (08:00 IST)
ದುಬೈ: ದುರ್ಬಲ ಅಫ್ಘಾನಿಸ್ತಾನ ವಿರುದ್ಧ ಏಷ್ಯಾ ಕಪ್ ಸೂಪರ್ ಫೋರ್ ಹಂತದ ಔಪಚಾರಿಕ ಪಂದ್ಯದಲ್ಲಿ ಟೀಂ ಇಂಡಿಯಾ 101 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ.
ಟೀಂ ಇಂಡಿಯಾ ಈ ಟೂರ್ನಿಯುದ್ಧಕ್ಕೂ ಈ ರೀತಿ ಸರ್ವಾಂಗೀಣ ಪ್ರದರ್ಶನ ತೋರಬೇಕೆಂದು ಅಭಿಮಾನಿಗಳು ಬಯಸಿದ್ದರು. ಆದರೆ ಸೂಕ್ತ ಕಾಲದಲ್ಲಿ ಸೂಕ್ತ ಆಟವಾಡದೇ ನಿನ್ನೆ ಆಟಕ್ಕುಂಟು ಲೆಕ್ಕಕ್ಕಿಲ್ಲದ ಔಪಚಾರಿಕ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್, ಬೌಲಿಂಗ್ ಘರ್ಜಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ವಿರಾಟ್ ಕೊಹ್ಲಿ ಶತಕದ ನೆರವಿನಿಂದ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಅಫ್ಘಾನ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 111 ರನ್ ಗಳಿಸಲಷ್ಟೇ ಶಕ್ತವಾಯಿತು.
ಭುವನೇಶ್ವರ್ ಕುಮಾರ್ ಆರಂಭದಲ್ಲೇ ಸತತ ನಾಲ್ಕು ವಿಕೆಟ್ ಕಿತ್ತು ಎದುರಾಳಿಗಳನ್ನು ಸೊಲ್ಲೆತ್ತದಂತೆ ಮಾಡಿದರು. ಬಳಿಕ ಅವರು ಮತ್ತೊಂದು ವಿಕೆಟ್ ಕಬಳಿಸಿ 4 ಓವರ್ ಗಳ ಕೋಟಾದಲ್ಲಿ 4 ರನ್ ನೀಡಿ 5 ವಿಕೆಟ್ ಗಳಿಸಿ ಅದ್ಭುತ ಪ್ರದರ್ಶನ ನೀಡಿದರು. ವಿಶೇಷವಾಗಿ ನಿನ್ನೆ ಅವರ ಬೌಲಿಂಗ್ ನಲ್ಲಿ ಎಂದಿನ ಸ್ವಿಂಗ್, ಮೊನಚು ಕಾಣಬಹುದಿತ್ತು. ಉಳಿದಂತೆ ಅರ್ಷ್ ದೀಪ್ ಸಿಂಗ್, ದೀಪಕ್ ಹೂಡಾ, ರವಿಚಂದ್ರನ್ ಅಶ್ವಿನ್ ತಲಾ 1 ವಿಕೆಟ್ ಕಬಳಿಸಿದರು. ಅಫ್ಘಾನಿಸ್ತಾನ ಪರ ಮಿಂಚಿದ ಇಬ್ರಾಹಿಂದ ಜಾರ್ಡನ್ 64 ರನ್ ಗಳಿಸಿ ಕೊನೆಯವರೆಗೆ ಅಜೇಯರಾಗುಳಿದರು. ಈ ಭರ್ಜರಿ ಗೆಲುವಿನ ಹೊರತಾಗಿಯೂ ಟೀಂ ಇಂಡಿಯಾ ಕೂಟದಿಂದ ಹೊರಬಿತ್ತು.