ನ್ಯೂಯಾರ್ಕ್: ಮುಂಬರುವ ಟಿ20 ವಿಶ್ವಕಪ್ ನಲ್ಲಿ ಎಲ್ಲರೂ ಎದಿರು ನೋಡುತ್ತಿರುವ ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯಕ್ಕೆ ಉಗ್ರರ ಕರಿನೆರಳು ಬಿದ್ದಿದೆ. ಈ ಪಂದ್ಯಕ್ಕೆ ಉಗ್ರರು ದಾಳಿ ಮಾಡುವ ಬೆದರಿಕೆ ಹಾಕಿದ್ದಾರೆ.
ಈ ಹಿನ್ನಲೆಯಲ್ಲಿ ನ್ಯೂಯಾರ್ಕ್ ನಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಈ ಬಾರಿ ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ಟಿ20 ವಿಶ್ವಕಪ್ ಆಯೋಜಿಸುತ್ತಿದೆ. ಭಾರತ ಮೊದಲ ಪಂದ್ಯವನ್ನು ಐರ್ಲೆಂಡ್ ವಿರುದ್ಧ ನ್ಯೂಯಾರ್ಕ್ ನಲ್ಲಿ ಆಡಲಿದೆ.
ಜೂನ್ 9 ರಂದು ಭಾರತ ಮತ್ತು ಪಾಕಿಸ್ತಾನ ಪಂದ್ಯವಿದೆ. ಈ ಪಂದ್ಯಕ್ಕೆ ಒಂಟಿ ತೋಳ ದಾಳಿ (ಒಬ್ಬ ಸದಸ್ಯನಿಂದ ದಾಳಿ) ಮಾಡುವುದಾಗಿ ಉಗ್ರ ಸಂಘಟನೆ ಐಸಿಸ್-ಕೆ ಬೆದರಿಕೆ ಹಾಕಿದೆ. ಕ್ರೀಡಾಂಗಣದ ಮೇಲೆ ಡ್ರೋಣ್ ಹಾರುತ್ತಿರುವ ವಿಡಿಯೋ ಬಿಡುಗಡೆ ಮಾಡಿದೆ. ಹೀಗಾಗಿ ಪಂದ್ಯಕ್ಕೆ ಡ್ರೋಣ್ ಮೂಲಕ ದಾಳಿ ನಡೆಯುವ ಭೀತಿ ಎದುರಾಗಿದೆ. ಈ ಹಿನ್ನಲೆಯಲ್ಲಿ ಕ್ರೀಡಾಂಗಣದ ಸುತ್ತ ಹಾರಾಟ ನಿಷೇಧಿತ ವಲಯವಾಗಿ ಘೋಷಿಸಲು ನ್ಯೂಯಾರ್ಕ್ ಪೊಲೀಸ್ ಯುಎಸ್ ಏವಿಯೇಷನ್ ಆಡ್ಮಿನಿಸ್ಟ್ರೇಷನ್ ಗೆ ಮನವಿ ಮಾಡಿದೆ.
ಭಾರತ ಮತ್ತು ಪಾಕಿಸ್ತಾನ ನಡುವೆ ಯಾವಾಗ, ಎಲ್ಲಿಯೇ ಪಂದ್ಯ ನಡೆದರೂ ಉಗ್ರರ ದಾಳಿಯ ಬೆದರಿಕೆ ಇದ್ದೇ ಇರುತ್ತದೆ. ಹಾಗಂತ ಅದನ್ನು ಸಹಜವೆಂಬಂತೆ ತಳ್ಳಿ ಹಾಕುವಂತಿಲ್ಲ. ಈ ನಿಟ್ಟಿನಲ್ಲಿ ನ್ಯೂಯಾರ್ಕ್ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದಾರೆ.